ಹಿಂದಿನ ಬಿಜೆಪಿ ಸರ್ಕಾರ ತಿರಸ್ಕರಿಸಿರುವ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಗೆ ಕಾಂಗ್ರೆಸ್ ಸರ್ಕಾರ ಮರುಜೀವ ನೀಡಬಾರದು ಎಂದು ಗೋರ ಸೇನಾ ಜಿಲ್ಲಾಧ್ಯಕ್ಷ ಕೆ. ಕಲ್ಲೇಶ್ ನಾಯ್ಕ ಆಗ್ರಹಿಸಿದರು.
ಅವರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ಬಿಜಪಿ ಸರ್ಕಾರ ಸಂವಿಧಾನದಲ್ಲಿ ಅವಕಾಶವಿಲ್ಲದ ಹಾಗೂ ಹೈಕೋರ್ಟ್‌ನಲ್ಲಿ ಬಾಕಿ ಇರುವ ಒಳಮೀಸಲಾತಿ ಪ್ರಕರಣಕ್ಕೆ ಕೈಹಾಕಿ ಕೈಸುಟ್ಟುಕೊಂಡು ಅಧಿಕಾರ ಕಳೆದುಕೊಂಡು ವಿಲವಿಲ ಒದ್ದಾಡುತ್ತಿದೆ. ಈಗಿನ ಸರ್ಕಾರ ಕೈಹಾಕಿದರೆ ಮುಂಬರುವ ಲೋಕಸಭಾ, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದರು.
ಹಿಂದುಳಿದ ವರ್ಗಗಳ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿ ತಿಳಿಯಲು ಅಂದಿನ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜ್ ನೇತೃತ್ವದಲ್ಲಿ ಜಾತಿಗಳ ಸಮೀಕ್ಷೆ
ಮಾಡಿಸಿದ್ದು ಈ ವರದಿಯನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜೇಶ್, ಜಿ. ಚಂದ್ರ ನಾಯ್ಕ ಉಪಸ್ಥಿತರಿದ್ದರು.