ಶಿವಮೊಗ್ಗ, ನ.05:
ಲಕ್ಷಾಂತರ ರೂ ಮೌಲ್ಯದ ಅಡಿಕೆ ಚೀಲ ತುಂಬಿದ ಲಾರಿಯೊಂದು ಕಳೆದ ಎರಡುವರೆ ತಿಂಗಳ ಹಿಂದೆ ಹೈಜಾಕ್ ಮಾಡಲಾಗಿತ್ತು. ಹೈಜಾಕ್ ಮಾಡಲಾದ ಲಾರಿ, 256 ಅಡಿಕೆ ಚೀಲಗಳನ್ನ ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯೋರ್ವನನ್ನ ಬಂಧಿಸುವಲ್ಲಿ ಹೊಳೆಹೊನ್ನೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಆದರೆ ಈ ಪ್ರಕರಣದಲ್ಲಿ ಚಾಲಾಕಿ ಲಾರಿ ಚಾಲಕರಿಬ್ಬರು ಪರಾರಿಯಾಗಿದ್ದಾರೆ.
ಹೊಳೆಹೊನ್ನೂರು ಸಮೀಪದ ಗುಡುಮಗಟ್ಟೆಯ ಅಡಕೆ ಗೋದಾಮಿನಿಂದ 70 ಲಕ್ಷ ರೂ. ಮೌಲ್ಯದ ಅಡಕೆ ಚೀಲಗಳನ್ನು ತುಂಬಿದ ಲಾರಿಯನ್ನ ಹೈಜಾಕ್ ಮಾಡಲಾಗಿತ್ತು. ಸೆಪ್ಟೆಂಬರ್ 23ರಂದು ಶಿವಮೊಗ್ಗದ ವರ್ಮಾ ಟ್ರಾನ್ಸ್‌ಪೋರ್ಟ್‌ಗೆ ಸೇರಿದ ಲಾರಿಯಲ್ಲಿ ಗುಡುಮಗಟ್ಟೆಯಿಂದ 70 ಲಕ್ಷ ರೂ. ಮೌಲ್ಯದ 260 ಅಡಕೆ ಚೀಲಗಳನ್ನು ತುಂಬಿಕೊಂಡು ಮಹಾರಾಷ್ಟ್ರದ ನಾಗಪುರದ ಕಡೆ ಹೊರಟಿತ್ತು.
ತಲುಪಬೇಕಾದ ಜಾಗವನ್ನ ತಲುಪದ ಲಾರಿಯನ್ನ ಚಾಲಕ ಭೀಮಾ ಕಾಳೆ ಹಾಗೂ ದಾದಾ ಪವಾರ್ ಮಹಾರಾಷ್ಟ್ರದ ಬೇರೊಂದು ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಅಡಕೆಯನ್ನು ಮಲ್ಕಾಪುರ್ ಮೂಲದ ಶಿವಾಜಿರಾವ್ ಎಂಬುವವರಿಗೆ ಮಾರಾಟ ಮಾಡಿದ್ದರು.
ಹೊಳೆಹೊನ್ನೂರು ಪೊಲೀಸರು ಮಹಾರಾಷ್ಟ್ರ ಪೊಲೀಸರ ಸಹಕಾರ ಪಡೆದು ಅಡಿಕೆ ಖರೀದಿಸಿದ ಶಿವಾಜಿರಾವ್ ಆಲಿಯಾಸ್ ಬಬ್ಲುವನ್ನು ಬಂಧಿಸಿ ಅಡಕೆ ಮತ್ತು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಮತ್ತಿಬ್ಬರು ಆರೋಪಿಗಳಾದ ಚಾಲಕ ಭೀಮಾ ಕಾಳೆ ಹಾಗೂ ದಾದಾ ಪವಾರ್ ತಲೆಮರೆಸಿಕೊಂಡಿದ್ದಾರೆ.
ಮಹಾರಾಷ್ಟ್ರದ ಉಸ್ಮಾನ್‌ಬಾದ್ ಜಿಲ್ಲೆಯ ಯರಮಾಲ ಪೋಲಿಸ್ ಠಾಣೆ ಸಿಬ್ಬಂದಿ ನೆರವಿನಿಂದ ಡಿವೈಎಸ್ಪಿ ಮಂಜುನಾಥ್, ಭದ್ರಾವತಿ ಗ್ರಾಮಾಂತರ ಸಿಪಿಐ ಹಾಗೂ ಹೊಳೆಹೊನ್ನೂರು ಪಿಎಸ್‌ಐ ಸುರೇಶ್ ನೇತೃತ್ವದ ತಂಡ ಪ್ರಕರಣವನ್ನು ಭೇದಿಸಿದೆ.