
ಶಿವಮೊಗ್ಗ, ನ.೦೪:
ವಿಜ್ಞಾನ ಸುಲಭವಾಗಿ ಅರ್ಥವಾಗಲು ಅದರ ಕಲಿಕೆ ಸುಲಲಿತವಾಗಲು ಇಂತಹ ಜ್ಞಾನ, ವಿಜ್ಞಾನ, ಸೃಜನಶೀಲತೆ ದಿನಾಚರಣೆಯಂತಹ ಕಾರ್ಯಕ್ರಮಗಳು ನಡೆಯಬೇಕು ಎಂದು ನ್ಯಾಮತಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿ.ಪಿ.ಪೂರ್ಣಾನಂದ ತಿಳಿಸಿದರು.

ಅವರು ಇಂದು ಬೆಳಗ್ಗೆ ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ವಸತಿ ವಿದ್ಯಾಲಯದಲ್ಲಿ ಆಯೋಜಿಸಿದ್ದ ಜ್ಞಾನ, ವಿಜ್ಞಾನ, ಸೃಜನಶೀಲತೆಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ನಮ್ಮ ಹಿಂದಿನ ಹಿರಿಯ ವಿಜ್ಞಾನಿಗಳನ್ನು ನಾವು ಮಾನಸಿಕ ನೆಲೆಗಟ್ಟಿನಲ್ಲಿ ಗಮನಿಸುವ ಅಗತ್ಯವಿದೆ ಎಂದು ಹೇಳಿದರು.
ಬೌತಶಾಸ್ತವನ್ನು ಎರಡು ವಿಭಾಗಗಳಲ್ಲಿ ನೋಡಬಹುದು. ಪ್ರಾಯೋಗಿಕ ಹಾಗೂ ಥಿಯರಿ ರೂಪದಲ್ಲಿ ನೋಡಬಹುದಾಗಿದೆ. ಕೆಲವು ವಿಜ್ಞಾನಿಗಳು ನೀಡಿದ ಸ್ವಯಂ ಕಲಿಕಾ ನಿಲುವುಗಳನ್ನು ನಾವು ಪ್ರಾಯೋಗಿಕವಾಗಿ ಗಮನಿಸಲಾಗದಿದ್ದರೂ ಅದು ಸತ್ಯ ಹಾಗೂ ಸ್ಪಷ್ಟತೆಯಲ್ಲಿರುತ್ತದೆ ಎಂದು ಸರ್ ಸಿ.ವಿ. ರಾಮನ್, ರಾಮಾನುಜಂ ಹಾಗೂ ಇತರರ ವಿಜ್ಞಾನಿಗಳ ಹಲವು ಉದಾಹರಣೆಗಳ ಸಹಿತ ತಿಳಿಮಾತು ಹೇಳಿದರು.
ವಿಜ್ಞಾನ ಎಂಬುದು ಕಷ್ಟವೇನಲ್ಲ. ನಿಮಗೆಲ್ಲ ಗೊತ್ತಿರುವುದೇ ವಿಜ್ಞಾನ. ವಿಜ್ಞಾನ ಅರ್ಥವಾಗಲು ಇಂತಹ ಪ್ರಾಯೋಗಿಕ ಪ್ರದರ್ಶನಗಳು ಅತ್ಯಗತ್ಯ ಎಂದ ಅವರು ರಾಮಕೃಷ್ಣ ಶಾಲೆಯ ಇಂತಹ ಬೃಹತ್ ವಿಜ್ಞಾನ ವಸ್ತು ಪ್ರದರ್ಶನವನ್ನು ವೀಕ್ಷಿಸಲು ಅನ್ಯ ಶಾಲೆಗಳಿಗೂ ಅನುಮತಿ ನೀಡಿ ಆ ಮಕ್ಕಳನ್ನು ಸಹ ಕ್ರಿಯಾತ್ಮಕವಾಗಿ ಪ್ರಚೋದಿಸುವ ಕಾರ್ಯಗಳು ನಡೆಯಲಿ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಶೋಭಾ ವೆಂಕಟರಮಣ ಅವರು ಪ್ರತಿ ವರ್ಷ ಗರಿಷ್ಠ ೫ರಿಂದ ೬ ವಿಷಯದ ಕುರಿತು ಪ್ರತಿ ಮಕ್ಕಳಿಗೆ ವಸ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುತ್ತಿದ್ದೇವು ಆದರೆ ಈ ಭಾರಿ ೩ ವಿಷಯದ ವಸ್ತು ಪ್ರದರ್ಶನಕ್ಕೆ ಅವಕಾಶ ನೀಡಿದ್ದು, ೫ ಸಾವಿರಕ್ಕೂ ಹೆಚ್ಚು ಮಾದರಿಗಳು ಇಡೀ ಶಾಲೆಯ ಎಲ್ಲಾ ಕೊಠಡಿಗಳಲ್ಲಿ ಅಲಂಕೃತಗೊಂಡಿವೆ. ಎಲ್ಕೆಜಿ, ಯುಕೆಜಿಯ ಮಕ್ಕಳು ಸಹ ಹತ್ತು ಹಲವು ಬಗೆಯ ಪ್ರಾಯೋಗಿಕ ವಸ್ತುಗಳನ್ನು ತಂದಿರುವುದು ವಿಶೇಷ ಎಂದರು.
ಹಿಂದೆ ಸುಮಾರು ೨೦ ವರ್ಷಗಳ ನಂತರ ಪೀಳಿಗೆಗಳ ನಡುವಿನ ಅಂತರ ಬದಲಾಗುತ್ತೆ ಎಂದು ಹೇಳಲಾಗಿತ್ತು. ಈಗ ಐದಾರು ವರ್ಷದಲ್ಲಿ ಬದಲಾವಣೆ ಕಂಡು ಬರುತ್ತಿದೆ. ಈಗ ಸಮಾಜ ವೇಗವಾಗಿ ಬದಲಾಗುತ್ತದೆ. ಇದು ಕೇವಲ ವಿಜ್ಞಾನ ವಸ್ತು ಪ್ರದರ್ಶನವಾಗದೇ ಜ್ಞಾನ, ಸೃಜನಶೀಲತೆಗೂ ಅವಕಾಶ ನೀಡಿದ್ದು, ಇದಕ್ಕೆ ಪೂರಕವಾಗಿ ಸ್ಪಂದಿಸಿದ ಶಿಕ್ಷಕರು ಹಾಗೂ ಪೋಷಕರಿಗೆ ಅಭಿನಂದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಡಾ.ಡಿ.ಆರ್.ನಾಗೇಶ್ ಅವರು ಮಾತನಾಡುತ್ತಾ, ಮಕ್ಕಳಲ್ಲಿ ಸ್ವಂತ ಆತ್ಮವಿಶ್ವಾಸ ಬೆಳೆಯಬೇಕಿದೆ ಕಲಿಕೆಯ ಆಸಕ್ತಿ ಹೆಚ್ಚಾಗಬೇಕಿದೆ. ಈ ಹಿನ್ನೆಲೆಯಲ್ಲಿ ನಮ್ಮ ನಿರಂತರದ ಈ ಕಾರ್ಯಕ್ರಮ ಮಕ್ಕಳನ್ನು ಸೃಜನಶೀಲರನ್ನಾಗಿಸುವಲ್ಲಿ ಯಶಸ್ವಿಯಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ತುಂಗಾ ತರಂಗ ಪತ್ರಿಕೆಯ ಸಂಪಾದಕ ಎಸ್.ಕೆ.ಗಜೇಂದ್ರಸ್ವಾಮಿ, ಸಂಸ್ಥೆಯ ಪ್ರಮುಖರಾದ ಅರುಣ್ ಉಪಸ್ಥಿತರಿದ್ದರು.

ಹಿರಿಯ ಶಿಕ್ಷಕ ಗಜೇಂದ್ರನಾಥ್ ಸ್ವಾಗತಿಸಿದರು. ಮುಖ್ಯಶಿಕ್ಷಕ ತೀರ್ಥೇಸ್ ವಂದಿಸಿದರು. ಶಾಲಾ ಮಕ್ಕಳು ಪ್ರಾರ್ಥಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.