ಶಿವಮೊಗ್ಗ,ಡಿ. 01:
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಸೀಬಿನಕೆರೆ ಶಾಲೆಯ ಸಹ ಶಿಕ್ಷಕ ಮಹಾಬಲೇಶ್ವರ ಹೆಗಡೆ ಹಾಗೂ ಬಿಆರ್ ಪಿ ಶಾಲೆಯ ಮತ್ತೋರ್ವ ಶಿಕ್ಷಕ ಶ್ರೀಕಾಂತ್ ರನ್ನು ಅಮಾನತುಗೊಳಿಸಿ ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಂ.ಎಲ್. ವೈಶಾಲಿ ಅವರು ಆದೇಶಿಸಿದ್ದಾರೆ ಎಂದು ಶಿವಮೊಗ್ಗ ಡಿಡಿಪಿಐ ತಿಳಿಸಿದ್ದಾರೆ.
ಈಗಷ್ಟೆ ತುಂಗಾತರಂಗ ದಿನಪತ್ರಿಕೆ ಜೊತೆ ಮಾತನಾಡಿದ ಅವರು ಈ ವಿಷಯ ತಿಳಿಸಿದ್ದಾರೆ.
ಕಳೆದ ಜೂನ್ 8 ರಂದು ಶಿರಸಿಯಲ್ಲಿ ನಡೆದ ಸಹಕಾರಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವಿವಿಧ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 7 ಮಂದಿ ಶಿಕ್ಷಕರುಗಳು ಅಂದು ಶಾಲೆಯಲ್ಲಿಯೂ ಕರ್ತವ್ಯ ನಿರ್ವಹಿಸಿದ್ದೇವೆಂದು ಹಾಜರಿ ಪುಸ್ತಕದಲ್ಲಿ ಸಹಿ ಮಾಡಿದ್ದರೆನ್ನಲಾಗಿದ್ದು ಅದು ಬಹಿರಂಗಗೊಂಡು ಸಿಕ್ಕಿ ಬೀಳುವ ಭಯದಿಂದ ಮತ್ತೆ ಹಾಜರಾತಿ ಪುಸ್ತಕವನ್ನು ತಿದ್ದಿರುವ ಆರೋಪ ಕೇಳಿಬಂದಿತ್ತು.
ಇಲ್ಲಿ ಮಹಾಬಲೇಶ್ವರ ಹೆಗಡೆ ಸೇರಿದಂತೆ 6 ಮಂದಿ ಶಿಕ್ಷಕರ ಮೇಲೆ ಈ ಆರೋಪ ಕೇಳಿ ಬಂದಿತ್ತು.
ಈ ಸಂಬಂಧ ನವೆಂಬರ್.21 ರಂದು ನಡೆದ ತಾಲ್ಲೂಕು ಪಂಚಾಯತಿ ಸಭೆಯಲ್ಲಿ ಸರ್ಕಾರಿ ಸಂಬಳ ಪಡೆದು ಶಾಲೆಯ ಶಿಕ್ಷಕರ ಹಾಜರಾತಿ ಪುಸ್ತಕದಲ್ಲಿ ಹಾಜರಾತಿಯನ್ನು ತೋರಿಸಿ ಸಹಕಾರಿ ಕಾರ್ಯಕ್ರಮ ಹಾಗೂ ಸ್ವಂತ ಕೆಲಸಗಳಲ್ಲಿ ಪಾಲ್ಗೊಳ್ಳುವ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ತಾಲೂಕು ಪಂಚಾಯತಿ ಸದಸ್ಯರಾದ ಕೆಳಕೆರೆ ದಿವಾಕರ್ ಶಿಕ್ಷಣ ಇಲಾಖೆ ಈ ಬಗ್ಗೆ ತನಿಖೆ ನಡೆಸಿ ಆಂತಹ ಶಿಕ್ಷಕರುಗಳನ್ನು ಶಿಕ್ಷಣ ಇಲಾಖೆಯಿಂದ ಹೊರಹಾಕಬೇಕು ಹಾಗೂ ಅವರನ್ನು ಅಮಾನತ್ತಿನಲ್ಲಿಡಬೇಕು ಎಂದು ಆಗ್ರಹಿಸಿದ್ದರು.
ತಾಲೂಕು ಪಂಚಾಯತಿಯ ಎಲ್ಲಾ ಸದಸ್ಯರುಗಳು ಈ ಸಂಬಂಧ ಸರ್ವಾನುಮತದ ನಿರ್ಣಯವನ್ನು ಕೈಗೊಂಡು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಕಳುಹಿಸಿದ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಶಿಕ್ಷಣ ಇಲಾಖೆಗೆ ನೀಡಿದ ಆದೇಶದನ್ವಯ ಇಲಾಖೆಯ ಮುಖ್ಯಸ್ಥರು ಸಮಿತಿ ರಚಿಸಿ ತನಿಖೆ ಕೈಗೊಂಡು 7 ಮಂದಿ ಶಿಕ್ಷಕರುಗಳು ಕರ್ತವ್ಯ ಲೋಪವೆಸಗಿದ್ದು ಹಾಜರಿ ಪುಸ್ತಕವನ್ನು ತಿದ್ದಿರುವುದು ಸಾಬೀತಾಗಿರುವ ವರದಿಯನ್ನು ಮುಖ್ಯ ಕಾರ್ಯನಿರ್ವಣಾಧಿಕಾರಿಗಳಿಗೆ ಸಲ್ಲಿಸಿದ ಮೇರೆಗೆ ಇದೀಗ ಮಹಾಬಲೇಶ್ವರ ಹೆಗಡೆ ಹಾಗೂ ಶ್ರೀಕಾಂತ್ ರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಗೊಳಿಸಿ ಆದೇಶ ಹೊರಡಿಸಿದ್ದು ಉಳಿದ 5 ಮಂದಿ ಶಿಕ್ಷಕರು ಹಾಗೂ ಇವರುಗಳಿಗೆ ಸಹಕರಿಸಿದ ಮುಖ್ಯ ಶಿಕ್ಷಕರುಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆನ್ನಲಾಗಿದೆ.