ಶಿವಮೊಗ್ಗ: ಮಹಿಳೆಯರು ಉದ್ಯಮ ಶೀಲರಾಗಿ ಸ್ವಂತ ಕಾಲ ಮೇಲೆ ನಿಂತು ಆರ್ಥಿಕ ಕ್ಷಮತೆ ಹೆಚ್ಚಿಸಿಕೊಳ್ಳಬೇಕು. ಸಾಲ ನೀಡುತ್ತಾರೆ ಎನ್ನುವ ಕಾರಣಕ್ಕೆ ತರಬೇತಿಯಲ್ಲಿ ಭಾಗವಹಿಸುವುದಲ್ಲ, ಕೌಶಲ್ಯ ಅಭಿವೃದ್ಧಿಯಾಗಲು ಮತ್ತು ಮಾಹಿತಿ ಪಡೆಯಲು ತರಬೇತಿ ಶಿಬಿರಗಳಲ್ಲಿ ಭಾಗವಹಿಸಬೇಕೆಂದು ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಸಹಾಯಕ ನಿರ್ದೇಶಕರಾದ ಸುರೇಶ್ ಹೇಳಿದ್ದಾರೆ.
ಅವರು ಇಂದು ವೆಂಕಟೇಶ ನಗರದ ಸ್ವೀಟ್ ಕಾಲೇಜಿನ ಆವರಣದಲ್ಲಿ ಕೈಗಾರಿಕಾ ಮತ್ತು ಉತ್ಪಾದನಾ ಸಂಘಟನ ಇಲಾಖೆ ಹಾಗೂ ಸಿಹಿಮೊಗ್ಗೆ ಮಹಿಳಾ ಅಭಿವೃದ್ಧಿ ಸಮಾಜದ ವತಿಯಿಂದ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ೧೦ ದಿನಗಳ ಕೈಗಾರಿಕಾ ಮತ್ತು ವಾಣಿಜ್ಯ ಸಲಹೆ ಮತ್ತು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಇಲಾಖೆಯಿಂದ ಏನೇನು ಸೌಲಭ್ಯಗಳು ಸಿಗುತ್ತದೆ? ಉದ್ಯಮಶೀಲರಾಗಲು ಯಾವ ರೀತಿಯ ತರಬೇತಿ ಪಡೆಯಬೇಕು? ಸೇವಾ ವಲಯಕ್ಕೆ ಮತ್ತು ಕೈಗಾರಿಕಾ ವಲಯಕ್ಕೆ ಸರ್ಕಾರದ ಏನೇನು ಸೌಲಭ್ಯಗಳು ದೊರೆಯುತ್ತವೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು ಎಂದರು.
ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ ಎನ್ನುವುದು ನಿರುದ್ಯೋಗಿ ಯುವಕ-ಯುವತಿಯರಿಗೆ ಮೊಬೈಲ್ ರಿಪೇರಿ, ಗ್ಯಾರೇಜ್, ಟೈಲರಿಂಗ್ ಮುಂತಾದ ಸೇವಾ ವಲಯಕ್ಕೆ ಸಂಬಂಧಿಸಿದ ಸ್ವ ಉದ್ಯೋಗಕ್ಕೆ ನೀಡುವಂತಹುದು. ಇದಕ್ಕೆ ನಗರದಲ್ಲಿ ಸಾಮಾನ್ಯ ವರ್ಗದವರಿಗೆ ೧೫% ಮತ್ತು ಮಹಿಳೆಯರಿಗೆ ೨೫% ಸಬ್ಸಿಡಿ ಸೌಲಭ್ಯವಿದೆ. ಗ್ರಾಮೀಣ ಭಾಗದವರಿಗೆ ಇನ್ನೂ ೧೦% ಹೆಚ್ಚಿನ ಸಾಲ ಸೌಲಭ್ಯವಿದೆ. ಮೊದಲು ಮಾಹಿತಿ ತೆಗೆದುಕೊಳ್ಳಿ. ಆನ್ಲೈನ್ನಲ್ಲಿ ಅರ್ಜಿ ಹಾಕಿ ದಾಖಲಾತಿಗಳನ್ನು ನೀಡಿದ್ದಲ್ಲಿ ಮಂಜೂರಾತಿ ಪತ್ರ ನೀಡುತ್ತಾರೆ. ೧೦ ದಿನದ ತರಬೇತಿ ಅವಧಿ ಕಡ್ಡಾಯವಾಗಿರುತ್ತದೆ. ತರಬೇತಿ ಅವಧಿಯಲ್ಲಿ ಎಲ್ಲಾ ಇಲಾಖೆಗಳ ತಜ್ಞರಿಂದ ಮಾಹಿತಿ ನೀಡಲಾಗುತ್ತದೆ. ಹಾಗೂ ಸರ್ಕಾರ ಸ್ಕೀಮ್ಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಮಹಿಳೆಯರು ಸ್ವಂತ ಕಾಲ ಮೇಲೆ ನಿಲ್ಲುವಂತಾಗಲು ಅನೇಕ ಉಪಯುಕ್ತ ತರಬೇತಿ ಮತ್ತು ಮಾಹಿತಿಗಳನ್ನು ನೀಡಲಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಹೆಚ್ಚಿನ ಮಾಹಿತಿ ಬೇಕಾದಲ್ಲಿ ನನ್ನನ್ನು ಸಂಪರ್ಕಿಸುವಂತೆ ಅವರು ಸೂಚಿಸಿದರು. ಈ ಸಂದರ್ಭದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಸಂಘಟನಾ ಇಲಾಖೆ, ಬೆಂಗಳೂರಿನ ಅಧಿಕಾರಿಗಳಾದ ಸುನಿತಾ, ನಾಗರಾಜ್, ಸಿಹಿಮೊಗೆ ಮಹಿಳಾ ಅಭಿವೃದ್ಧಿ ಸಮಾಜದ ಅಧ್ಯಕ್ಷರಾದ ಶಾರದ ಶೇಷಗಿರಿಗೌಡ, ಕಾರ್ಯದರ್ಶಿ ಉಷಾ ಉತ್ತಪ್ಪ, ಖಜಾಂಚಿ ಸವಿತಾ ಸತೀಶ್, ನೇತ್ರಾವತಿ ಟಿ.ಗೌಡ, ಹಾಗೂ ಆಸಕ್ತ ಮಹಿಳೆಯರು ಭಾಗವಹಿಸಿದ್ದರು.