ವಿಐಎಸ್ಎಲ್ ಉಳಿಸಿ ಹೋರಾಟ ಸಮಿತಿ
ಶಿವಮೊಗ್ಗ: ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಬಾರದು. ಗುತ್ತಿಗೆ ಕಾರ್ಮಿಕರಿಗೆ ೨೬ ದಿನ ಕೆಲಸ ನೀಡಬೇಕು ಹಾಗೂ ನಿವೃತ್ತ ಕಾರ್ಮಿಕರಿಗೆ ವಿತರಿಸಿರುವ ಮನೆಗಳನ್ನು ಮುಂದುವರೆಸಬೇಕು ಎಂದು ವಿಐಎಸ್ಎಲ್ ಉಳಿಸಿ ಹೋರಾಟ ಸಮಿತಿ ಒತ್ತಾಯಿಸಿದೆ.
೨೦೧೬ರಲ್ಲಿ ಅಂದಿನ ಸಂಸದ ಬಿ.ಎಸ್.ಯಡಿಯೂರಪ್ಪ ಹಾಗೂ ಹಾಲಿ ಸಂಸದ ಬಿ.ವೈ.ರಾಘವೇಂದ್ರ ಅವರು ವಿಐಎಸ್ಎಲ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಲು ಬಿಡುವುದಿಲ್ಲ ಮತ್ತು ರಾಜ್ಯ ಸರ್ಕಾರ ಕಬ್ಬಿಣದ ಅದಿರಿನ ಗಣಿ ಮಂಜೂರು ಮಾಡಿದ್ದಲ್ಲಿ ಕೇಂದ್ರ ಸರ್ಕಾರದಿಂದ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಅಭಿವೃದ್ದಿಪಡಿಸುವುದಾಗಿ ಭರವಸೆ ನೀಡಿದ್ದು, ಈ ಭರವಸೆಯು ಇನ್ನೂ ಈಡೇರಿಲ್ಲ ಎಂದು ವಿಐಎಸ್ಎಲ್ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ಕಾರ್ಮಿಕ ಮುಖಂಡ ಎಸ್.ಎನ್.ಬಾಲಕೃಷ್ಣ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಭದ್ರಾವತಿ ಜನತೆಗೆ ನೀಡಿದ್ದ ವಾಗ್ದಾನವನ್ನು ಮರೆತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಕಾರ್ಖಾನೆಯನ್ನು ಕೇಂದ್ರ ಸರ್ಕಾರದ ನೀತಿಯಂತೆ ಖಾಸಗಿಯವರಿಗೆ ಮಾರಾಟ ಮಾಡಿ ಅಭಿವೃದ್ದಿಪಡಿಸುವುದಾಗಿ ವರಸೆ ಬದಲಾಯಿಸಿರುವುದನ್ನು ತೀವ್ರವಾಗಿ ಖಂಡಿಸಿದರು.
ಭಾರತೀಯ ಉಕ್ಕು ಪ್ರಾಧಿಕಾರದ ಉದ್ಯಮ ವಿಐಎಸ್ಎಲ್ನ್ನು ಖಾಸಗೀ ಬಂಡವಾಳದಾರರಿಗೆ ಮಾರಾಟ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀತಿ ಆಯೋಗದ ಶಿಫಾರಸಿನಂತೆ ೨೦೧೬ರ ಸೆಪ್ಟಂಬರ್ನಲ್ಲಿ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಅದರ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ೨೦೧೯ರ ಜುಲೈ ೪ ರಂದು ಕೇಂದ್ರ ಸರ್ಕಾರ ಕಾರ್ಖಾನೆಯನ್ನು ಮಾರಾಟ ಮಾಡಲು ಆಸಕ್ತಿದಾರ ಖರೀದಿದಾರರನ್ನು ಹುಡುಕಲು ಜಾಗತಿಕ ಟೆಂಡರ್ ಪ್ರಕಟಣೆ ಹೊರಡಿಸಿತ್ತು. ೨೦೨೦ರ ಸೆಪ್ಟಂಬರ್ ೨೧ರಂದು ಕೇಂದ್ರ ಉಕ್ಕು ಸಚಿವ ಧರ್ಮೇಂದ್ರ ಪ್ರದಾನ್ ಅವರು ವಿಐಎಸ್ಎಲ್ ಖರೀದಿಸಲು ಖಾಸಗೀ ಮಾಲೀಕರು ಆಸಕ್ತಿ ತೋರಿದ್ದಾರೆಂದು ಸಂಸತ್ ಅಧಿವೇಶನದಲ್ಲಿ ಉತ್ತರಿಸಿದ್ದಾರೆ ಎಂದರು.
ರಾಜ್ಯ ಮತ್ತು ಕೇಂದ್ರ ಸರ್ಕಾರ ಕಾರ್ಖಾನೆಗೆ ೨೦೧೧ರಲ್ಲಿ ಸೊಂಡುರು ತಾಲ್ಲೂಕಿನ ಎನ್ಇಬಿ ರೇಂಜಿನಲ್ಲಿ ೧೪೦ ಹೆಕ್ಟೇರ್ ಹಾಗೂ ರಮಣದುರ್ಗ ಪ್ರದೇಶದಲ್ಲಿ ೧೫೦ ಎಕರೆ ಕಬ್ಬಿಣದ ಅದಿರಿನ ಗಣಿ ಮಂಜೂರು ಮಾಡಿ ರಾಜ್ಯಪತ್ರ ಆದೇಶ ಹೊರಡಿಸಿದ್ದರೂ ಸಹ ಕಾರ್ಖಾನೆ ಅಭಿವೃದ್ದಿಯಾಗಿಲ್ಲ ಎಂದರು.
೨೦೧೫ರ ಆಗಸ್ಟ್ ೨೧ರಂದು ಕೇಂದ್ರ ಉಕ್ಕು ಸಚಿವ ನರೇಂದ್ರಸಿಂಗ್ ತೋಮರ್ ಕಾರ್ಖಾನೆಗೆ ಭೇಟಿ ನೀಡಿ ಕಾರ್ಖಾನೆಯ ಅಭಿವೃದ್ದಿಗೆ ಭಾರತೀಯ ಉಕ್ಕು ಪ್ರಾಧಿಕಾರದ ವತಿಯಿಂದ ೧೦೦೦ ಕೋಟಿ ರೂ.ಬಂಡವಾಳ ತೊಡಗಿಸುವುದಾಗಿ ಹಾಗೂ ೨೦೧೮ರ ಮಾರ್ಚ್ ೧೮ ರಂದು ಅಂದಿನ ಉಕ್ಕು ಸಚಿವ ಚೌದರಿ ಬೀರೇಂದ್ರಸಿಂಗ್ ಕಾರ್ಖಾನೆಗೆ ಭೇಟಿ ನೀಡಿ ೬ ಸಾವಿರ ಕೋಟಿ ರೂ. ಬಂಡವಾಳ ತೊಡಗಿಸಿ ಕಾರ್ಖಾನೆ ಅಭಿವೃದ್ದಿಪಡಿಸುವುದಾಗಿ ಭರವಸೆ ನೀಡಿದ್ದರು. ಭರವಸೆಯಂತೆ ೧ ರೂ.ಸಹ ಬಂಡವಾಳ ಬಿಡುಗಡೆಯಾಗಿಲ್ಲ ಎಂದು ದೂರಿದರು.
ಖಾಸಗೀಕರಣದಿಂದ ಕಾರ್ಖಾನೆ ಶಾಶ್ವತವಾಗಿ ನಶಿಸಿ ಹೋಗಲಿದ್ದು ಇದನ್ನೇ ನಂಬಿರುವ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಉದ್ಯೋಗ ಕಳೆದುಕೊಂಡು ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಖಾನೆಯ ನಗರ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಉಳಿಕೆಯಾಗಿದ್ದ ವಸತಿ ಗೃಹಗಳನ್ನು ನಿವೃತ್ತ ಕಾರ್ಮಿಕರಿಗೆ ವಿತರಣೆ ಮಾಡಿದ್ದು, ಇಂದು ಖಾಸಗೀಕರಣದ ನೆಪ ಹೇಳಿ ಮನೆ ಖಾಲಿ ಮಾಡಿಸಿ ಎಲ್ಲರನ್ನು ಬೀದಿಪಾಲು ಮಾಡಲು ಕಾರ್ಖಾನೆ ಆಡಳಿತ ಮಂಡಳಿ ಹೊರಟಿದೆ ಎಂದು ಆರೋಪಿಸಿದರು.
ಕಾರ್ಖಾನೆ ಅಭಿವೃದ್ದಿ ನೆಪದಲ್ಲಿ ಖಾಸಗೀ ಬಂಡವಾಳದಾರರಿಗೆ ಬಿಡಿಗಾಸಿಗೆ ಮಾರಾಟ ಮಾಡಿ ಭದ್ರಾವತಿಯ ಸಾರ್ವಜನಿಕ ಆಸ್ತಿಯನ್ನು ಒಬ್ಬ ಮಾಲೀಕನಿಗೆ ವರ್ಗಾಯಿಸಲು ಒಳ ಒಪ್ಪಂದವಾಗಿರುವುದು ಭದ್ರಾವತಿ ನಗರಕ್ಕೆ ಅತ್ಯಂತ ಮಾರಕ ಸಂಗತಿಯಾಗಿದೆ ಎಂದರು.
ಕಾರ್ಖಾನೆಯ ಅಭಿವೃದ್ದಿಗೆ ಹಾಗೂ ಉಳಿಸಿಕೊಳ್ಳಲು ೨೨ ಬಾರಿ ದೆಹಲಿ ಹೋಗಿ ಮನವಿ ಸಲ್ಲಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ರಾಜಕೀಯ ಇಚ್ಚಾಸಕ್ತಿ ಇದ್ದರೆ ಮಾತ್ರ ಕಾರ್ಖಾನೆ ಉಳಿಯುತ್ತದೆ. ಜನಪ್ರತಿನಿಧಿಗಳು ಇಚ್ಚಾಶಕ್ತಿ ತೋರಬೇಕು ಎಂದರು.
ಭದ್ರಾವತಿ ನಗರಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆಯಲು ಪಕ್ಷಾತೀತವಾಗಿ ಕಾರ್ಖಾನೆ ರಕ್ಷಿಸಲು, ಕಾರ್ಮಿಕರ ಮತ್ತು ಗುತ್ತಿಗೆ ಕಾರ್ಮಿಕರ, ನಿವೃತ್ತ ಕಾರ್ಮಿಕರ, ಸಾರ್ವಜನಿಕರ ಹಿತಾಸಕ್ತಿ ಕಾಪಾಡಲು ವಿಐಎಸ್ಎಲ್ ಉಳಿಸಿ ಹೋರಾಟ ಸಮಿತಿ ರಚನೆಯಾಗಿದ್ದು, ನಮ್ಮ ಬೇಡಿಕೆ ಈಡೇರಿಸುವಂತೆ ಸಂಸದರನ್ನು ಎಚ್ಚರಗೊಳಿಸಲು ನ.೨೮ ರಂದು ಸಮಿತಿಯಿಂದ ಭದ್ರಾವತಿಯ ಎಲ್ಲ ಪ್ರಮುಖರ ನಿಯೋಗ ಶಿವಮೊಗ್ಗದಲ್ಲಿ ಸಂಸದರನ್ನು ಭೇಟಿ ಮಾಡಲಿದ್ದು, ಅವರ ಪ್ರತಿಕ್ರಿಯೆ ಆಧರಿಸಿ ಸಂಘಟಿತ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಜೆ.ಜಗದೀಶ್, ಜಿ.ಪಂ.ಸದಸ್ಯ ಮಣಿಶೇಖರ್, ಕಾಂಗ್ರೆಸ್ ಅಧ್ಯಕ್ಷ ಚಂದ್ರೇಗೌಡ, ಜೆಡಿಎಸ್ ಅಧ್ಯಕ್ಷ ಕರುಣಾ ಮೂರ್ತಿ, ಗುತ್ತಿಗೆ ಕಾರ್ಮಿಕರ ಸಂಘದ ಸುರೇಶ್, ಆಮ್ ಆದ್ಮಿ ಪಕ್ಷದ ರವಿ, ಸುರೇಶ್, ಕೆಂಪಯ್ಯ, ನರಸಿಂಹಾಚಾರ್ ಉಪಸ್ಥಿತರಿದ್ದರು.