ಶಿವಮೊಗ್ಗ, ನ.24:
ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ವಿರುದ್ದ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನ.೨೫ರ ನಾಳೆ ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದ್ದು, ಶಿವಮೊಗ್ಗದಲ್ಲೂ ಸಹ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಜೆಸಿಟಿಯು ಜಿಲ್ಲಾ ಸಂಚಾಲಕ ಎಂ.ನಾರಾಯಣ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದ ಆರ್ಥಿಕ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಹಾಗೂ ಅನ್ನದಾತ ರೈತ, ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕನನ್ನು ಪೂರ್ಣ ಗುಲಾಮಗಿರಿಗೆ ತಳ್ಳುವ ಕೇಂದ್ರ ಸರ್ಕಾರದ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು.
ಕೊರೊನಾ ಸಾಂಕ್ರಾಮಿಕ ರೋಗದಿಂದ ದೇಶದಲ್ಲಿ ಅನಿರೀಕ್ಷಿತವಾಗಿ ಲಾಕ್ಡೌನ್ ಆಯಿತು. ಮೊದಲೇ ಸಂಕಷ್ಟದಲ್ಲಿರುವ ಕಾರ್ಮಿಕರ ಹಿತವನ್ನು ಕಾಪಾಡುವ ಬದಲಿಗೆ ಮತ್ತಷ್ಟು ಸಂಕಷ್ಟಕ್ಕೆ ಕೇಂದ್ರ ಸರ್ಕಾರ ನೂಕಿದೆ. ಇದನ್ನು ವಿರೋಧಿಸಿ ನಾಳೆ ಬೆಳಿಗ್ಗೆ 11 ಗಂಟೆಗೆ ಮಹಾವೀರ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಕೇಂದ್ರ ಸರ್ಕಾರ ಕಾರ್ಮಿಕ ಸಂಘಟನೆಗಳ ಜೊತೆ ಯಾವುದೇ ಚರ್ಚೆ ನಡೆಸದೇ ಕೋವಿಡ್ -19 ಪರಿಸ್ಥಿತಿಯ ದುರುಪಯೋಗಪಡಿಸಿಕೊಂಡು ಹಾಗೂ ವಿರೋಧಪಕ್ಷದ ಗೈರು ಹಾಜರಿಯಲ್ಲಿ ಮೂರು ಕಾರ್ಮಿಕರ ಹಿತಕ್ಕೆ ಧಕ್ಕೆ ತರುವಂತಹ ಕಾರ್ಮಿಕ ಸಂಹಿತೆಗಳನ್ನು ಸಂಸತ್ನಲ್ಲಿ ಅಪ್ರಜಾ ಸತ್ತಾತ್ಮಕ ರೀತಿಯಿಂದ ಅಂಗೀಕರಿಸಿದೆ. ಇದರಿಂದಾಗಿ ಕಾರ್ಮಿಕರಿಗೆ ಅನ್ಯಾಯ ವಾಗಿದೆ ಎಂದು ದೂರಿದರು.
ರೈತ ವಿರೋಧಿ ಕಾನೂನುಗಳನ್ನು ವಾಪಾಸ್ ಪಡೆಯಬೇಕು, ಆದಾಯ ತೆರಿಗೆರಹಿತ ಕುಟುಂಬಗಳಿಗೆ 7,5೦೦ ರೂ.ಪಾವತಿಸಬೇಕು. ಎಲ್ಲ ಅಗತ್ಯವಿರುವವರಿಗೆ ತಿಂಗಳಿಗೆ 1೦ ಕೆಜಿ ಉಚಿತ ಪಡಿತರ ನೀಡಬೇಕು, ಸಾರ್ವಜನಿಕ ವಲಯ ಸೇವಾ ಸಂಸ್ಥೆಗಳ ಖಾಸಗೀಕರಣ ನಿಲ್ಲಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದ್ದು, ಈ ಮುಷ್ಕರಕ್ಕೆ ಅಖಿಲ ಭಾರತ ಸಂಘಟನೆಗಳು, ಕಾರ್ಮಿಕರು, ನೌಕರರು, ಅಸಂಘಟಿತ ಕ್ಷೇತ್ರದ ಕಾರ್ಮಿಕರು, ಬೀದಿಬದಿ ವ್ಯಾಪಾರಸ್ಥರು, ಆಟೋ, ಟ್ಯಾಕ್ಷಿ, ಸಾರಿಗೆ ನೌಕರರು, ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತರು, ರೈತ ಸಂಘಟನೆಗಳು, ದಲಿತ ಸಂಘರ್ಷ ಸಮಿತಿ ಸೇರಿದಂತೆ ಇತರೆ ಸಂಘಟನೆಗಳು ಬೆಂಬಲ ನೀಡಿ ಮುಷ್ಕರದಲ್ಲಿ ಭಾಗವಹಿಸುತ್ತಿವೆ ಎಂದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಹನುಮಮ್ಮ, ಕರ್ನಾಟಕ ಜನಶಕ್ತಿ ಕಾರ್ಯದರ್ಶಿ ಕೆ.ಎಲ್.ಅಶೋಕ್, ಡಿಎಸ್ಎಸ್ ಜಿಲ್ಲಾ ಪ್ರಧಾನ ಸಂಚಾಲಕ ಹಾಲೇಶಪ್ಪ, ಅನಿಲ್,ಶಿವಮೂರ್ತಿ, ಚಂದ್ರಪ್ಪ ಉಪಸ್ಥಿತರಿದ್ದರು.