ಶಿವಮೊಗ್ಗ, ಸೆಪ್ಟಂಬರ್ ೧೩ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಕೆಲ ಬದಲಾವಣೆಗಳನ್ನು ತರಲಾಗುತ್ತಿದ್ದು, ಜೊತೆಗೆ ಕ್ರೀಡೆಗೂ ಸಹ ಒತ್ತು ನೀಡಲಾಗುತ್ತಿದೆ ಎಂದು ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.
ಮಂಗಳವಾರ ತಾಲೂಕಿನ ಜಡೆ ಗ್ರಾಮದ ಶ್ರೀ ಸಿದ್ಧವೃಷಬೇಂದ್ರ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ತಾಪಂ, ಗ್ರಾಪಂ, ಶಾಲಾ ಶಿಕ್ಷಣ ಇಲಾಖೆ ಇಲಾಖೆ ಹಾಗೂ ಶ್ರೀ ವರದಾ ವಿದ್ಯಾಭಿವೃದ್ಧಿ ಸಮಿತಿಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ೧೪ ವರ್ಷ ವಯೋಮಿತಿಯೊಳಗಿನ ಬಾಲಕ-ಬಾಲಕಿಯರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಡ ವಿದ್ಯಾರ್ಥಿಗಳು ಸಹ ಉತ್ತಮ ಶಿಕ್ಷಣ ಪಡೆಯಬೇಕು ಎಂಬುದು ಶಿಕ್ಷಣ ಇಲಾಖೆಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಮೊದಲ ಹಂತದಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಒತ್ತು ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿಯೂ ಎಲ್ಕೆಜಿ ಮತ್ತು ಯುಕೆಜಿಗೆ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಕೆಪಿಎಸ್ ಶಾಲೆಗಳನ್ನು ಆರಂಭಿಸಿ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಒದಗಿಸಲಾಗುವುದು. ಜೊತೆಗೆ ಗ್ರಾಮೀಣ ಭಾಗದ ಕ್ರೀಡಾಕೂಡಗಳು ಹೆಚ್ಚು ಮಹತ್ವವನ್ನು ಪಡೆಯುತ್ತಿವೆ.
ಇದರಿಂದ ಗ್ರಾಮೀಣ ಭಾಗದ ಕ್ರೀಡಾಪಟುಗಳನ್ನು ಗುರುತಿಸಲು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಶಿಕ್ಷಕರು ಹಾಗೂ ಪೋಷಕರು ಪ್ರೋತ್ಸಾಹವನ್ನು ನೀಡಬೇಕು. ಸರ್ಕಾರವು ಸಹ ಸಹಕಾರ ನೀಡಲಿದೆ ಎಂದರು.
ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬದಲಾವಣೆ ತರಲಾಗುತ್ತಿದೆ. ಪೋಷಕರು ಮತ್ತು ಮಕ್ಕಳ ಮೇಲಿನ ಒತ್ತಡ ಕಡಿಮೆ ಮಾಡಲು ಒಂದೇ ವರ್ಷದಲ್ಲಿ ಮೂರು ಸಲ ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ವರ್ಷಕ್ಕೆ ಮೂರು ಪರೀಕ್ಷೆ ನಡೆಸಲು ಹಲವು ಒತ್ತಡಗಳ ನಡುವೆಯೂ ಚಾಲನೆ ನೀಡಲಾಗಿದೆ. ಮಕ್ಕಳ ಸಮಯ ಅಮೂಲ್ಯವಾಗಿದ್ದು, ಯಾವ ಮಕ್ಕಳು ಶಿಕ್ಷಣದಿಂದ ದೂರ ಉಳಿಯಬಾರದು ಎಂಬ ಸದುದ್ಧೇಶದಿಂದ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ತಾವು ಶಿಕ್ಷಣ ಸಚಿವರಾದ ತರುವಾಯ ಇಲಾಖೆಯಲ್ಲಿ ಅನೇಕ ಬದಲಾವಣೆಗೆ ಮುನ್ನುಡಿ ಬರೆಯಲಾಗಿದೆ. ಸರ್ಕಾರ ರಚನೆಯಾಗಿ ಕೇವಲ ನಾಲ್ಕು ತಿಂಗಳು ಮಾತ್ರ ಕಳೆದಿದ್ದು, ತಾಲೂಕಿನ ಅಭಿವೃದ್ಧಿಗೆ ಶೀಘ್ರದಲ್ಲಿಯೇ ಹೆಚ್ಚಿನ ಒತ್ತು ಮತ್ತು ಮೊದಲ ಆದ್ಯತೆ ನೀಡುತ್ತೇನೆ. ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುವುದು. ಜನತೆ ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಬಾರದ ಹಾಗೆ ಮೂಲ ಸೌಲಭ್ಯಗಳನ್ನು ಒದಗಿಸುವುದು ಮತ್ತು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುವುದು ಎಂದರು.
ಶ್ರೀ ವರದಾ ವಿದ್ಯಾಭಿವೃದ್ಧಿ ಸಮಿತಿ ಅಧ್ಯಕ್ಷ ಹೊಳಿಯಪ್ಪ ಗೌಡ ಕಚವಿ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ಕ್ರೀಡಾಜ್ಯೋತಿ ಸ್ಥಾಪಿಸಿದರು.
ಜಡೆ ಸಂಸ್ಥಾನ ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ ಹಾಗೂ ಶಾಂತಾಪುರ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಡೆ ಗ್ರಾಪಂ ಅಧ್ಯಕ್ಷ ಅಮಿತ್ ಗೌಡ ಅಧ್ಯಕ್ಷತೆ ವಹಿಸಿದದರು. ತಹಶೀಲ್ದಾರ್ ಹುಸೇನ್ ಸರಕಾವಸ್, ತಾಪಂ ಇಒ ಡಾ. ಎನ್.ಆರ್. ಪ್ರದೀಪ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಂ. ಸತ್ಯನಾರಾಯಣ, ಕ್ಷೇತ್ರ ಸಮನ್ವಯಾಧಿಕಾರಿ ದಯಾನಂದ ಕಲ್ಲೇರ್, ದೈಹಿಕ ಶಿಕ್ಷಣ ಪರಿವೀಕ್ಷಕ ಲಿಂಗರಾಜ ಒಡೆಯರ್, ಜಿಪಂ ಮಾಜಿ ಸದಸ್ಯ ಶಿವಲಿಂಗೇಗೌಡ, ಗ್ರಾಪಂ ಅಧ್ಯಕ್ಷ ಅಮಿತ್ ಗೌಡ, ಶ್ರೀವರದಾ ವಿದ್ಯಾಭಿವೃದ್ಧಿ ಸಮಿತಿ ಕಾರ್ಯದರ್ಶಿ ಕೆ. ನಾಗರಾಜ ಗೌಡ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಪ್ರಕಾಶ್ ಮಡ್ಲೂರು, ಶಾಲೆಯ ಮುಖ್ಯಶಿಕ್ಷಕ ರೇವಣಸಿದ್ದಪ್ಪ, ಎಲ್.ಕೆ ಉರಣಕರ್ ವಿಜಯಕುಮಾರ ಸೇರಿದಂತೆ ಇತರರಿದ್ದರು.