ಶಿವಮೊಗ್ಗ, ಸೆಪ್ಟೆಂಬರ್,11
     ಪರಿಸರ ಇದ್ದರೆ ನಾವು. ಆದ್ದರಿಂದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಮುಖ್ಯ ಜವಾಬ್ದಾರಿಯಾಗಿದೆ ಎಂದು  ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ವಿದ್ಯಾರ್ಥಿಗಳಿಗೆ ತಿಳಿಸಿದರು.


     ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ಗಾಡಿಕೊಪ್ಪದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸಸ್ಯ ಶ್ಯಾಮಲ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


       ಇತ್ತೀಚೆಗೆ ಹೆಚ್ಚು ಅರಣ್ಯ ನಾಶವಾಗುತ್ತಿರುದನ್ನು ಕಾಣುತ್ತಿದ್ದೇವೆ. ಅರಣ್ಯ ನಾಶವಾದಷ್ಟು ಪರಿಸರದ ಮೇಲೆ ಹೆಚ್ಚಿನ ದುಷ್ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಗಿಡ-ಮರಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಮಾಡಬೇಕಿದೆ. ಇದು ನಮ್ಮೆಲ್ಲರ ಜವಾಬ್ದಾರಿ ಮತ್ತು ಇಂದಿನ ತುರ್ತಾಗಿದೆ.


    ಪರಿಸರ ಸಂರಕ್ಷಣೆ ವಿಷಯದಲ್ಲಿ ವಿದ್ಯಾರ್ಥಿಗಳಾದ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದ್ದು, ಪ್ರತಿ ಮಕ್ಕಳು ತಮ್ಮ ಮನೆಗಳು ಮತ್ತು ಶಾಲೆಗಳಲ್ಲಿ ಒಂದಾದರೂ ಗಿಡ ನೆಟ್ಟು ಪೋಷಿಸಬೇಕೆಂದು ಕರೆ ನೀಡಿದರು.


        ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಮಾತನಾಡಿ,  ಶಾಲಾ ಮಕ್ಕಳ ಹಾಜರಾತಿ ಹಾಗೂ ಸ್ಥಳಾವಕಾಶ ಆಧರಿಸಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ 18718 ಮತ್ತು ಪ್ರೌಢಶಾಲೆ ಮಕ್ಕಳಿಗೆ 5566 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 24284 ಸಸಿಗಳನ್ನು ಆಯ್ದ ಶಾಲೆಗಳಲ್ಲಿ ನೆಡಲಾಗುವುದು. ಮಕ್ಕಳು ಪರಿಸರದ ಕುರಿತು ಹೆಚ್ಚು ಜಾಗೃತರಾಗಬೇಕು. ಗಿಡಗಳನ್ನು ನೆಟ್ಟ ನಂತರ ಒಂದು ಗಿಡಕ್ಕೆ ವಾರಕ್ಕೆ 10 ಲೀ ನೀರನ್ನು ಹಾಕಬೇಕು. ಗಿಡಗಳನ್ನು ನೆಟ್ಟ ನಂತರ ಉಸ್ತುವಾರಿಗಾಗಿ ಮಕ್ಕಳಿಗೆ ಗಿಡಗಳನ್ನು ಹಂಚಿಕೆ ಮಾಡಲಾಗುವುದು. ಸತತ 3 ವರ್ಷಗಳ ಕಾಲ ಮಕ್ಕಳು ಗಿಡಗಳಿಗೆ ನೀರೆರೆದು ಪೋಷಿಸಬೇಕು. ಚೆನ್ನಾಗಿ ಗಿಡ ಬೆಳೆಸಿದ ಮಕ್ಕಳಿಗೆ ಶಾಲೆಯಲ್ಲಿ ಬಹುಮಾನ ನೀಡಲಾಗುವುದು ಎಂದರು.
      ಬಿಇಓ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣ ಇಲಾಖೆ ಮತ್ತು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಸ್ಥಳಾವಕಾಶವುಳ್ಳ ಶಾಲೆಗಳ ಸುತ್ತಮುತ್ತ ಒಂದು ವರ್ಷದ ಕಾಲಾವಧಿಯಲ್ಲಿ 50 ಲಕ್ಷ ಸಸಿಗಳನ್ನು ನೆಡುವ ಸರ್ಕಾರದ ವಿನೂತನ ಕಾರ್ಯಕ್ರಮ ‘ಸಸ್ಯ ಶ್ಯಾಮಲ’ ಕ್ಕೆ ಇಂದು ರಾಜ್ಯಾದ್ಯಂತ ಚಾಲನೆ ದೊರೆತಿದೆ. ಸೆ.11 ರಿಂದ 15 ರವರೆಗೆ 5 ದಿನಗಳ ಕಾಲ ಈ ಕಾರ್ಯಕ್ರಮವು ಶಾಲೆಗಳು ಮತ್ತು ಪಿಯು ಕಾಲೇಜಿನಲ್ಲಿ ನಡೆಯಲಿದೆ ಎಂದರು.


    ಗಾಡಿಕೊಪ್ಪದ ಶಾಲೆಯ ಆವರಣದಲ್ಲಿ ಜಿ.ಪಂ ಸಿಇಓ, ಅರಣ್ಯ ಇಲಾಖೆ ಆರ್‍ಎಫ್‍ಓ, ಡಿಡಿಪಿಐ, ಬಿಇಓ ಸೇರಿದಂತೆ ಗಣ್ಯರು ವಿವಿಧ ಗಿಡಗಳನ್ನು ನೆಟ್ಟು ನೀರೆರದರು.


      ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಆರ್‍ಎಫ್‍ಓ ಪ್ರದೀಪ್ ಕುಮಾರ್, ಎಸ್‍ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ್, ಶಾಲಾ ಮುಖ್ಯೋಪಾಧ್ಯಾಯಿನಿ ಭುವನೇಶ್ವರಿ, ಡಿಡಿಪಿಐ ಕಚೇರಿ ತಾಂತ್ರಿಕ ಸಹಾಯಕಿ ಲಕ್ಷ್ಮಿ ಹೆಚ್ ಸಿ, ಸಿಆರ್‍ಪಿ ಶೈಲಶ್ರೀ, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!