ಶಿವಮೊಗ್ಗ : ಸಮಸಮಾಜದ ಪ್ರಾಮುಖ್ಯತೆ ದುರ್ಬಲಗೊಳ್ಳುತ್ತಿರುವ ಸಂದರ್ಭದಲ್ಲಿ ಜೀವನ ಮೌಲ್ಯಗಳ ಮೂಲಕ ಸಮಸಮಾಜ ನಿರ್ಮಾಣ ಮಾಡುವುದು ಯುವ ಸಮೂಹದ ಗುರಿಯಾಗಲಿ ಎಂದು ತುಮಕೂರಿನ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ವತಿಯಿಂದ ಎಂಬಿಎ ವಿಭಾಗ ಮತ್ತು ಯುಎನ್ಒಡಿಸಿ ಸಂಯುಕ್ತಾಶ್ರಯದಲ್ಲಿ ಸೋಮವಾರ ವಿದ್ಯಾರ್ಥಿಗಳಿಗಾಗಿ  ಏರ್ಪಡಿಸಿದ್ದ ‘ಸುಸ್ಥಿರ ವೈಯುಕ್ತಿಕ ಸಮಗ್ರತೆ ಉತ್ತಮ ಜೀವನ ಮತ್ತು ಆರೋಗ್ಯ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಇತಿಹಾಸದ ಮೌಲ್ಯಗಳನ್ನು ಯುವ ಸಮೂಹ ಅರಿಯಬೇಕಾಗಿದೆ. ಅದರೇ ಇತಿಹಾಸವೇ ಕಣ್ಮರೆಯಾಗುತ್ತಿರುವುದು ವಿಷಾದನೀಯ. ಜೀವನ ಮೌಲ್ಯಗಳಿಂದ ಯುವ ಸಮೂಹ ತನ್ನ ವೈಯುಕ್ತಿಕ ಸಮಗ್ರತರಯನ್ನು ಸುಸ್ಥಿರಗೊಳಿಸಿಕೊಳ್ಳಲು ಸಾಧ್ಯವಾಗಲಿದೆ.

ನಿರಾಶೆಗಿಂತಲು ಮನುಷ್ಯನಲ್ಲಿ ಕುಸಿಯುವ ಇನ್ನೊಂದು ವಿಚಾರವಿಲ್ಲ. ಜೀವನದ ಸವಾಲುಗಳನ್ನು ಮೌಲ್ಯಯುತ ವ್ಯಕ್ತಿತ್ವಗಳಿಂದ ಎದರುರಿಸಬೇಕಿದೆ. ಎಲ್ಲಾ ಸಮಸ್ಯೆಗಳಿಗೆ ವಿಜ್ಞಾನ ಪರಿಹಾರ ನೀಡುವುದಿಲ್ಲ. ಜೀವನದ ಮೌಲ್ಯಗಳು ಪರಿಹಾರ ಕಂಡುಕೊಳ್ಳುವ ಕ್ರಮ ಹೇಳಿಕೊಡಲಿದೆ. 

ತೈತ್ತಿರೀಯೋಪನಿಷತ್ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಐದು ಆಯಾಮಗಳನ್ನು ವ್ಯಾಖ್ಯಾನಿಸಿದೆ. ಅನ್ನ, ಪ್ರಾಣ, ಮನೊ, ವಿಜ್ಞಾನ, ಆನಂದಮಯಗಳ ಮೂಲಕ ಸುಸ್ಥಿರ ಉತ್ತಮ ಬದುಕನ್ನು ನಡೆಸುವ ಜೀವನೋಪದೇಶವನ್ನು ಹೇಳಿಕೊಡಲಿದೆ ಎಂದು ಹೇಳಿದರು.

ದಕ್ಷಿಣ ಏಷ್ಯಾದ ಯುಎನ್ಒಡಿಸಿ ಸಂವಹನ ಅಧಿಕಾರಿ ಸಮರ್ಥ ಪಾಟಕ್ ಮಾತನಾಡಿ, ಸಮಾಜದ ಉನ್ನತಿಕರಣಕ್ಕೆ ಯುವ ಸಮೂಹ ತನ್ನ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕಿದೆ. ಸಮಾಜ ಕೋವಿಡ್, ಡ್ರಗ್ಸ್, ಸೈಬರ್ ಕ್ರೈಮ್ ನಂತಹ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಅಂತಹ ಅಂಧತ್ವದ ವಾತಾವರಣದಿಂದ ಹೊರಬರುವ ಮೌಲ್ಯಾಧಾರಿತ ನಡೆ ಯುವ ಸಮೂಹದಾಗಬೇಕಿದೆ.

ವಿಶ್ವದಲ್ಲಿ ಇನ್ನೂರ ತೊಂಬತ್ತಾರು ಮಿಲಿಯನ್ ಜನ ಮಾದಕವ್ಯಸನಿಗಳಾಗಿದ್ದಾರೆ ಎಂದು ಸರ್ವೆಯೊಂದು ತಿಳಿಸುತ್ತಿದೆ‌. ಇನ್ನಾದರು ಯುವ ಸಮೂಹ ಅನ್ಯಾಯದ ವಿರುದ್ಧ ಧ್ವನಿಯೆತ್ತಬೇಕಿದೆ. ಧ್ವನಿಯಿಲ್ಲದವರ ಧ್ವನಿಯಾಗಿ ಉತ್ತಮ ಸಮಾಜಕ್ಕಾಗಿ ಕೈ ಜೋಡಿಸಬೇಕಿದೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್ .ನಾಗರಾಜ ಮಾತನಾಡಿ, ಸಮಗ್ರ‌ ಚಿಂತನೆಗಳು ಎಂಬುದನ್ನು ನಮ್ಮ ಜೀವನದ ಪ್ರತಿಯೊಂದು ಹಂತದಲ್ಲಿ ಅಭಿವೃದ್ಧಿ ಪಡಿಸಿಕೊಂಡು ಹೋಗಬೇಕು. ಪ್ರಾಮಾಣಿಕತೆ ಎಂಬುದು ಸನ್ನಿವೇಶಗಳ ಆಧಾರದಲ್ಲಿ ಕೆಲವೊಮ್ಮೆ ವ್ಯತ್ಯಾಸಗಳಾಗಬಹುದು. ಹಾಗಾಗಿ ನಮ್ಮ ಸುತ್ತಲಿನ ವಾತಾವರಣವನ್ನು ಆರೋಗ್ಯಯುತವಾಗಿರುವಂತೆ ಎಚ್ಚರ ವಹಿಸಿ ಎಂದು ಹೇಳಿದರು.

ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಮಾತನಾಡಿದರು. ಜೆಎನ್ಎನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಎಂಬಿಎ ವಿಭಾಗದ ನಿರ್ದೇಶಕರಾದ ಡಾ.ಶ್ರೀಕಾಂತ್, ಕಾರ್ಯಕ್ರಮ ಸಂಯೋಜಕರಾದ ಅನುರಾಧ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದ ಕಾರ್ಯಾಗಾರದಲ್ಲಿ ದೈಹಿಕ ಆರೋಗ್ಯ ಸುಧಾರಣೆ ಕುರಿತು ಜಯಶ್ರೀ ಹಳ್ಳೂರು ಹಾಗೂ ವೈದ್ಯ ಡಾ.ಪಿ.ನಾರಾಯಣ್, ದೀರ್ಘಾವಧಿಯ ಯಶಸ್ಸು ಕುರಿತು ಜಿಲ್ಲಾ ನ್ಯಾಯಾಧೀಶರಾದ ಚಂದನ್, ಭಾವನಾತ್ಮಕ ಯೋಗ ಕ್ಷೇಮ ಕುರಿತು ಕಟೀಲ್ ಅಶೋಕ್ ಪೈ ಕಾಲೇಜಿನ ಕರಣ್ ಹಾಗೂ ಮನೋವೈದ್ಯ ಡಾ.ನವೀನ್ ಆನಂದ್, ಆರೋಗ್ಯಕರ ಸಂಬಂಧ ಕುರಿತು ಸಂಜನಾ ಫರ್ನಾಂಡಿಸ್ ಹಾಗೂ ಡಾ.ಅರ್ಚನಾ ಭಟ್, ಸ್ಥಿತಿಸ್ಥಾಪಕತ್ವ ಕುರಿತು ಅಪೇಕ್ಷಾ ಪ್ರಭು ಹಾಗೂ ಪ್ರೊ.ನ್ಯಾನ್ಸಿ, ನೈತಿಕ ನಿರ್ಧಾರ ಮಾಡುವ ಬಗೆ ಕುರಿತು ವೀರೇಶಾನಂದ ಸ್ವಾಮೀಜಿ ಮಾತನಾಡಿದರು. 

By admin

ನಿಮ್ಮದೊಂದು ಉತ್ತರ

You missed

error: Content is protected !!