ಶಿವಮೊಗ್ಗ: ಕಾಂಗ್ರೆಸ್ ಮತ್ತು ವಿರೋದಿ ಶಕ್ತಿಗಳನ್ನು ಸೋಲಿಸುವ ಉದ್ದೇಶದಿಂದ ಜೆಡಿಎಸ್‌ನೊಂದಿಗೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂದು ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್ ಈಶ್ವರಪ್ಪ ಹೇಳಿದರು.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭೆ ಚುನಾವಣೆ ಎಂಬುದು ಚಿಕ್ಕದಲ್ಲ. ಇದು ಕೇವಲ ಚುನಾವಣೆ ಅಲ್ಲ. ದೇಶ ಉಳಿಸುವ ಕಾಯಕ. ಕಾಂಗ್ರೆಸ್ ವಿರೋಧಿ ಶಕ್ತಿಗಳೆಲ್ಲಾ ಒಂದಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಬೇಕೆಂಬ ಉದ್ದೇಶದಿಂದ ಜೆಡಿಎಸ್‌ನೊಂದಿಗೆ ಸೇರಿ ಚುನಾವಣೆ ಎದುರಿಸುತ್ತೇವೆ. ಈ ಬಾರಿಯೂ ೨೮ ಸ್ಥಾನಗಳನ್ನು ಗೆದ್ದು ಕೇಂದ್ರದಲ್ಲಿ ಅಧಿಕಾರ ಹಿಡಿಯಲಾಗುತ್ತದೆ ಎಂದ ಅವರು, ಕಳೆದ ಬಾರಿ ಕಾಂಗ್ರೆಸ್ ಒಂದು ಸ್ಥಾನ ಪಡೆದಿತ್ತು. ಈ ಬಾರಿ ಒಂದೂ ಸ್ಥಾನ ಪಡೆಯದಂತೆ ಕಾಂಗ್ರೆಸ್ ವಿರೋಧಿ ಮತಗಳನ್ನು ಕ್ರೋಡೀಕರಿಸಿ ಜಯಗಳಿಸಲಾಗುತ್ತದೆ ಎಂದರು.
ಕರ್ನಾಟಕವನ್ನು ಬರಪೀಡಿತ ರಾಜ್ಯವೆಂದು ಘೋ?ಣೆ ಮಾಡುವಲ್ಲಿ ರಾಜ್ಯ ಸರ್ಕಾರ ನಾಳೆ ಬಾ ಎನ್ನುವ ಧೋರಣೆ ಅನುಸರಿಸುತ್ತಿದೆ. ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಾಗಿದೆ. ಜಲಾಶಯಗಳಲ್ಲಿ ನೀರಿಲ್ಲ. ನಾಟಿ ಮಾಡಿರುವ ಬೆಳೆಯೂ ನೀರಿಲ್ಲದೆ ಒಣಗುತ್ತಿವೆ. ಆದರೂ ಬರ ಘೋ?ಣೆ ಮಾಡದೆ ಕಾದು ನೋಡುವ ತಂತ್ರ ಅನುಸರಿಸಲಾಗುತ್ತದೆ. ಕೊನೆಯ ದಿನಗಳಲ್ಲಿ ಮಳೆ ಬಂದರೆ ಬರ ಘೋ?ಣೆ ಮಾಡದೆ ಪರಿಹಾರ ನೀಡದೆ ಇರಬಹುದೆಂಬ ಮನಸ್ಥಿತಿಯಲ್ಲಿ ಸರ್ಕಾರವಿದೆ ಎಂದರು.
ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಪರಿಹಾರ ಕೊಡಿ ಎಂದರೆ ಆತ ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೈಯಕ್ತಿಕ ನೋವಿನಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದು ಸ್ವತಃ ಸಚಿವರೇ ಹೇಳಿದ್ದಾರೆ. ಇದು ರೈತ ವಿರೋಧಿ ನೀತಿಯಾಗಿದೆ. ಈ ರೀತಿ ಹೇಳುವ ಸಚಿವರನ್ನು ರಾಜಕೀಯ ಜೀವನದಲ್ಲೇ ನೋಡಿಲ್ಲ ಎಂದರು.
ರಾಜ್ಯದಲ್ಲಿ ಬರ ಆವರಿಸಿದ್ದರೂ ಯಾವ ಜಿಲ್ಲೆಯ ಉಸ್ತುವಾರಿ ಸಚಿವರೂ ಜಿಲ್ಲಾ ಪ್ರವಾಸ ಮಾಡುತ್ತಿಲ್ಲ. ರೈತರ ಆಹವಾಲು ಆಲಿಸುತ್ತಿಲ್ಲ. ಲೋಕಸಭೆ ಚುನಾವಣೆಯಲ್ಲೂ ಗೆಲ್ಲುವುದಿಲ್ಲ. ಮುಂದೆ ವಿಧಾನ ಸಭೆ ಚುನಾವಣೆಯಲ್ಲೂ ಗೆಲ್ಲುವುದಿಲ್ಲ ಎಂಬ ಮನಸ್ಥಿತಿಯಲ್ಲಿ ಸಚಿವರು, ಶಾಸಕರಿದ್ದಾರೆ ಎಂದು ಟೀಕಿಸಿದರು.
ಸನಾತನ ಧರ್ಮವನ್ನು ಟೀಕಿಸುವವರಿಗೆ ಈ ಬಾರಿಯ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ. ಇಂಡಿಯಾ ಎಂಬುದು ವಿದೇಶಿ ಹೆಸರಾಗಿದೆ. ಆದರೆ ಯಾರ‍್ಯಾರು ಭಾರತ ಎಂದು ಹೆಮ್ಮೆ ಪಡುತ್ತಾರೋ ಅವರೆಲ್ಲ ದೇಶಪ್ರೇಮಿಗಳು ಎಂದರು.