ಶಿವಮೊಗ್ಗ, ಸೆಪ್ಟೆಂಬರ್ 07,
     ತೀವ್ರತರ ಮಿಷನ್ ಇಂದ್ರಧನುಷ್ 5.0 ಕಾರ್ಯಕ್ರಮದ ಎರಡನೇ ಸುತ್ತಿನ ಲಸಿಕಾಕರಣವನ್ನು ಯಶಸ್ವಿಗೊಳಿಸಲು ಎಲ್ಲ ಇಲಾಖೆಗಳು ಸಹಕರಿಸಬೇಕೆಂದು ಆರ್‍ಸಿಹೆಚ್‍ಓ ಡಾ.ನಾಗರಾಜನಾಯ್ಕ ಕೋರಿದರು.
       ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ಕುರಿತು ಇಂದು ಮಹಾನಗರಪಾಲಿಕೆಯಲ್ಲಿ ಆಯೋಜಿಸಲಾಗಿದ್ದ ನಗರ ಟಾಸ್ಕ್‍ಫೋರ್ಸ್ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


      ಲಸಿಕೆಗಳಿಂದ ತಡೆಗಟ್ಟಬಹುದಾದ ಮಾರಕ ರೋಗಗಳ ವಿರುದ್ದ ಮಕ್ಕಳನ್ನು ರಕ್ಷಿಸಲು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಅನೇಕ ಲಸಿಕೆಗಳನ್ನು ನೀಡಲಾಗುತ್ತಿದೆ. ಈ ಲಸಿಕೆಗಳನ್ನು ಕಾಲ ಕಾಲಕ್ಕೆ ಪಡೆಯದೇ ವಂಚಿತರಾದ 0 ಯಿಂದ 5 ವರ್ಷದೊಳಗಿನ ಮಕ್ಕಳನ್ನು ಹಾಗೂ ಗರ್ಭಿಣಿ ಸ್ತ್ರೀಯರನ್ನು ಗುರಿಯಾಗಿಸಿಕೊಂಡು ಅವರಿಗೆ ಬಿಟ್ಟು ಹೋದ ಲಸಿಕೆಗಳನ್ನು ಪೂರ್ಣಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ.


     ಎಲ್ಲ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ತೀವ್ರತರ ಮಿಷನ್ ಇಂದ್ರಧನುಷ್ ಅಭಿಯಾನದ 2 ನೇ ಸುತ್ತು ಸೆಪ್ಟೆಂಬರ್ 11 ರಿಂದ 16 ನಡೆಯಲಿದೆ. ಮೊದಲನೇ ಸುತ್ತಿನಲ್ಲಿ ಜಿಲ್ಲೆಯಾದ್ಯಂತ ಉತ್ತಮ ಪ್ರಗತಿ ಸಾಧಿಸಲಾಗಿದೆ. ಸಾರ್ವತ್ರಿಕ ಲಸಿಕಾಕರಣದೊಂದಿಗೆ ಇಂದ್ರಧನುಷ್ ಲಸಿಕಾಕರಣವೂ ನಡೆದಿದ್ದರಿಂದ ಗುರಿಗಿಂತ ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ ಎಂದ ಅವರು ಆರೋಗ್ಯ ನಿರೀಕ್ಷಕರು ಲಸಿಕೆ ಬಿಟ್ಟು ಹೋದ ಮಕ್ಕಳ ಮತ್ತು ಗರ್ಭಿಣಿಯರಿಗೆ ಲಸಿಕೆ ನೀಡಲು ಹೆಚ್ಚು ನಿಗಾ ವಹಿಸಬೇಕೆಂದರು.


     ನಗರ ವ್ಯಾಪ್ತಿ ಅದರಲ್ಲೂ ಹೈರಿಸ್ಕ್ ಏರಿಯಾ(ಹೆಚ್‍ಆರ್‍ಎ)ಗಳಾದ ಸ್ಲಂ, ಇಟ್ಟಿಗೆಭಟ್ಟಿಗಳು, ವಲಸಿಗರು ವಾಸಿಸುವ ಸ್ಥಳಗಳು, ನಗರ ಹೊರವಲಯ(ಪೆರಿ-ಅರ್ಬನ್) ಪ್ರದೇಶಗಳಲ್ಲಿ ಲಸಿಕಾವಂಚಿತರನ್ನು ಗುರುತಿಸಿ ಲಸಿಕೆ ನೀಡಬೇಕು. ಅದಕ್ಕೆ ಪಾಲಿಕೆ ವ್ಯಾಪ್ತಿಯ ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಸಂಘಗಳು, ಆರೋಗ್ಯ ನಿರೀಕ್ಷಕರ ನೆರವು ಅತ್ಯಗತ್ಯವಾಗಿದೆ. ಹಾಗೂ ಲಸಿಕಾಕರಣದ ಕುರಿತು ವಾರ್ಡ್ ಸಮಿತಿ, ಮಾಸ್ ಕಮಿಟಿಗಳ ಮೂಲಕ  ಜಾಗೃತಿ ಮೂಡಿಸಬೇಕು. ನಗರ ವ್ಯಾಪ್ತಿ ಮತ್ತು ಹೆಚ್‍ಆರ್‍ಎ ಗಳಲ್ಲಿ ಲಸಿಕಾಕರಣಕ್ಕೆ ಸಹಕಾರಿಯಾಗುವಂತೆ ಪಾಲಿಕೆ ವಾಹನಗಳಲ್ಲಿ ಜಿಂಗಲ್ಸ್, ಮೈಕಿಂಗ್, ಟಾಂ ಟಾಂ ವ್ಯವಸ್ಥೆ ಮಾಡುವಂತೆ ಕೋರಿದರು.


      ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ನಗರ ಪ್ರದೇಶದಲ್ಲಿ 8 ಪಿಹೆಚ್‍ಸಿ, 28 ಸಬ್ ಸೆಂಟರ್‍ಗಳಿದ್ದು 26 ಸಬ್ ಸೆಂಟರ್‍ಗಳಿವೆ. ಮೊದಲನೇ ಸುತ್ತಿನಲ್ಲಿ ಬಿಟ್ಟು ಹೋದ ಮಕ್ಕಳು ಮತ್ತು ಗರ್ಭಿಣಿಯರನ್ನು ಗುರುತಿಸಲು ರಿ-ಸರ್ವೇ ಕಾರ್ಯ ಮಾಡಲಾಗುತ್ತಿದೆ. ಮೊದಲನೇ ಸುತ್ತಿನಲ್ಲಿ ಶೇ.100 ಕ್ಕಿಂತ ಹೆಚ್ಚು ಲಸಿಕಾಕರಣ ಆಗಿದೆ. ಎರಡನೇ ಸುತ್ತಿನ ಲಸಿಕಾಕರಣಕ್ಕೆ ಮೈಕ್ರೋಪ್ಲಾನ್ ಸಿದ್ದಪಡಿಸಲಾಗಿದ್ದು,   174 ಗರ್ಭಿಣಿಯರು ಮತ್ತು 805 ಮಕ್ಕಳನ್ನು ಲಸಿಕಾಕರಣಕ್ಕೆ ಗುರುತಿಸಲಾಗಿದೆ. 18 ಹೈರಿಸ್ಕ್ ಏರಿಯಾ ಸೇರಿದಂತೆ ಒಟ್ಟು 73 ಕಡೆ ಲಸಿಕಾಕರಣ ನಡೆಯಲಿದೆ.


     ಲಸಿಕೆ ಬಿಟ್ಟು ಹೋಗಿರುವ, ಲಸಿಕಾ ವಂಚಿತರು ಲಸಿಕೆ ಪಡೆಯುವ ಕುರಿತು ಜಾಗೃತಿ ಮೂಡಿಸಲು ಪಾಲಿಕೆ ವತಿಯಿಂದ ಮೈಕಿಂಗ್, ಶಾಲಾ ಪ್ರಾರ್ಥನೆ ವೇಳೆ ಮಕ್ಕಳಿಗೆ ಲಸಿಕೆ ಬಗ್ಗೆ ಮಾಹಿತಿ ನೀಡುವುದು. ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಲಸಿಕೆ ಬಗ್ಗೆ ತಿಳಿಸುವುದು ಹಾಗೂ ಎಲ್ಲ ಇಲಾಖೆಗಳ ಸಹಕಾರ ಕೋರಲಾಗಿದೆ ಎಂದರು.
     ಸಭೆಯಲ್ಲಿ ಪಾಲಿಕೆ ಆರೋಗ್ಯಾಧಿಕಾರಿ(ಪ್ರ) ರೇಖಾ, ನಗರ ವೈದ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಕರು, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!