ಸಾಗರ : ಸರ್ಕಾರಿ ಭೂಮಿ ಒತ್ತುವರಿ ಮಾಡುವವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಿ. ತಾಲ್ಲೂಕಿನ ಪಡವಗೋಡು, ಯಡಜಿಗಳೆಮನೆ ಇನ್ನಿತರೆ ಭಾಗಗಳಲ್ಲಿ ಸರ್ಕಾರಿ ಭೂಮಿ ಒತ್ತುವರಿ ಬಗ್ಗೆ ವ್ಯಾಪಕ ದೂರುಗಳಿದ್ದು ತಹಶೀಲ್ದಾರರು ಅಂತಹವರ ವಿರುದ್ದ ಕಠಿಣ ಸೆಕ್ಷನ್ ಹಾಕಿ ಜೈಲಿಗೆ ಕಳಿಸಲು ಹಿಂದೆ ಸರಿಯಬೇಡಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ ನೀಡಿದರು.


ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒತ್ತುವರಿಯನ್ನು ಬಿಡಿಸಿಕೊಂಡು ಅದಕ್ಕೆ ಬೇಲಿ ಹಾಕಿ ಅದನ್ನು ಅಭಿವೃದ್ದಿ ಉದ್ದೇಶಕ್ಕೆ ಬಳಸಿ ಕೊಳ್ಳಲು ತಿಳಿಸಿದರು.


ಹೊಸದಾಗಿ ಸರ್ಕಾರಿ ಭೂಮಿ ಒತ್ತುವರಿಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬೇಡಿ. ೧೯೬೮ರ ಹಿಂದೆ ಸ್ವಾಧೀನದಲ್ಲಿದ್ದ ಭೂಮಿಯನ್ನು ರೈತರಿಂದ ಬಿಡಿಸಿ ಕೊಳ್ಳಲು ಹೋಗಬೇಡಿ. ನ್ಯಾಯಾಲಯದ ಆದೇಶ ಪಾಲನೆ ಜೊತೆಗೆ ರೈತರ ಹಿತಾಸಕ್ತಿಯನ್ನು ರಕ್ಷಣೆ ಮಾಡಿ. ಒಂದೊಮ್ಮೆ ರೈತರು ಭೂಮಿ ಅತಿಕ್ರಮಿಸಿದ್ದರೆ ಅದನ್ನು ನನ್ನ ಗಮನಕ್ಕೆ ತನ್ನಿ. ನೀವು ಏಕಾಏಕಿ ರೈತರ ಮೇಲೆ ಕೇಸ್ ಹಾಕಲು ಹೋಗಬೇಡಿ. ನಾನು ಸ್ಥಳಕ್ಕೆ ಬಂದು ರೈತರ ಮನವೊಲಿಸುತ್ತೇನೆ. ಅರಣ್ಯ ಇಲಾಖೆಯಿಂದ ರೈತರಿಗೆ ಯಾವುದೇ ರೀತಿಯ ತೊಂದರೆ ಕೊಡಬೇಡಿ. ಕಾಡುಪ್ರಾಣಿಗಳನ್ನು ಬೇಟೆಯಾಡುವವರ ವಿರುದ್ದ ಕಾನೂನುಕ್ರಮ ಕೈಗೊಳ್ಳಿ ಎಂದು ಹೇಳಿದರು.


ತಾಲ್ಲೂಕಿನಲ್ಲಿ ಮಳೆ ಪ್ರಮಾಣ ತೀರ ಕಡಿಮೆ ಇರುವುದರಿಂದ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡುವಂತೆ ಸರ್ಕಾರಕ್ಕೆ ತಿಳಿಸಲಾಗುತ್ತದೆ. ಈಗಾಗಲೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ಜಂಟೀ ಸರ್ವೇ ಕೈಗೊಳ್ಳಲು ಸೂಚನೆ ನೀಡಲಾಗಿದೆ. ರೈತರಿಗೆ ಬೆಳೆವಿಮೆ ಕುರಿತು ಜಾಗೃತೆ ಮೂಡಿಸಿ ಹೆಚ್ಚು ರೈತರನ್ನು ವಿಮಾ ವ್ಯಾಪ್ತಿಯಲ್ಲಿ ತನ್ನಿ. ಸಾಧ್ಯವಾದರೆ ಕರಪತ್ರದ ಮೂಲಕ ಮನೆಮನೆಗೆ ಮಾಹಿತಿ ತಲುಪಿಸಿ. ರೈತರು ಮತ್ತು ಶಾಲೆಗಳ ಮೇಲೆ ವಾಲಿರುವ ಮರಗಳನ್ನು ಕಟಾವ್ ಮಾಡಲು ಅರ್ಜಿ ನೀಡಿದ್ದರೆ ತಕ್ಷಣ ಅದನ್ನು ತೆರವುಗೊಳಿಸಿ ಎಂದು ಅರಣ್ಯ ಇಲಾಖೆಗೆ ಸೂಚಿಸಿದರು.


ಗಣಪತಿ ಹಬ್ಬ ಹತ್ತಿರ ಬರುತ್ತಿರುವುದರಿಂದ ನಗರವ್ಯಾಪ್ತಿಯಲ್ಲಿ ಸ್ವಚ್ಚತೆ ಬಗ್ಗೆ ಗಮನ ಹರಿಸಲು ನಗರಸಭೆ ಪೌರಾಯುಕ್ತ ನಾಗಪ್ಪ ಅವರಿಗೆ ಸೂಚಿಸಿದ ಬೇಳೂರು, ಬೀದಿದೀಪ, ಕುಡಿಯುವ ನೀರಿನ ಬಗ್ಗೆ ಗಮನ ಕೊಡಿ. ೩೧ ವಾರ್ಡ್‌ಗಳಲ್ಲಿ ಜನರು ಸ್ವಚ್ಚತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸ್ವಚ್ಚತೆಯಲ್ಲಿ ಲೋಪ ಕಂಡು ಬಂದರೆ ಅಂತಹ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವುದಾಗಿ ಎಚ್ಚರಿಕೆ ನೀಡಿದ ಅವರು, ಬೀದಿನಾಯಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲು ತಿಳಿಸಿದರು.


ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಸುಜಾತ, ತಾಲ್ಲೂಕು ಪಂಚಾಯ್ತಿ ಇಓ ನಾಗೇಶ್ ಬ್ಯಾಲಾಳ್, ತಹಶೀಲ್ದಾರ್ ಚಂದ್ರಶೇಖರ ನಾಯ್ಕ್, ಡಿವೈಎಸ್‌ಪಿ ಗೋಪಾಲಕೃಷ್ಣ ನಾಯಕ್ ಇನ್ನಿತರರು ಹಾಜರಿದ್ದರು. (

By admin

ನಿಮ್ಮದೊಂದು ಉತ್ತರ

You missed

error: Content is protected !!