ಈ ಪೊಲೀಸರ ಕ್ರಮಕ್ಕೆ ಶ್ಲಾಘನೆ
ಶಿವಮೊಗ್ಗ, ಆ. 29:
ಗಾಜಿನ ಚೂರಿನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಅಪ್ರಾಪ್ತ ಯುವತಿಯನ್ನು ಗಸ್ತಿನಲ್ಲಿದ್ದ ಪೊಲೀಸ್ ಇಲಾಖೆಯ ಇ.ಆರ್.ಎಸ್.ಎಸ್ ವಾಹನದ ಸಿಬ್ಬಂದಿಗಳು ಸಕಾಲದಲ್ಲಿ ರಕ್ಷಿಸಿ, ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಆ ಯುವತಿಯನ್ನು ಕಾಪಾಡಿದ ಘಟನೆ ನಡೆದಿದೆ.
ಶಿವಮೊಗ್ಗ ನಗರದ ಪ್ರೀಡಂ ಪಾರ್ಕ್ ನಲ್ಲಿ ನಿನ್ನೆ ಸೋಮವಾರ ಇಂತಹದೊಂದು ಘಟನೆ ನಡೆದಿದೆ.
ಇಲ್ಲಿ ಸುಮಾರು 17 ವರ್ಷ ವಯೋಮಾನದ ಯುವತಿಯೇ ಆತ್ಮಹತ್ಯೆಗೆ ಯತ್ನಿಸಿದ್ದು ವಿನೋಬನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ರಾಘವೇಂದ್ರ ಹಾಗೂ ವಾಹನ ಚಾಲಕ ಎ.ಹೆಚ್.ಸಿ. ಚನ್ನಕೇಶವ ಸಕಾಲದಲ್ಲಿ ನೆರವಾಗಿದ್ದಾರೆ.
ಈ ಸಿಬ್ಬಂದಿಗಳು ಇ.ಆರ್.ಎಸ್.ಎಸ್ ವಾಹನದಲ್ಲಿ ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ಮಧ್ಯಾಹ್ನ ಗಸ್ತಿನಲ್ಲಿದ್ದಾಗ, ಫ್ರೀಡಂ ಪಾರ್ಕ್ ನಲ್ಲಿ ಯುವತಿಯೋರ್ವಳು ತನ್ನ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿರುವುದನ್ನು ಗಮನಿಸಿದ್ದಾರೆ.
ತಕ್ಷಣವೇ ಯುವತಿಯನ್ನು ತಮ್ಮ ವಾಹನದಲ್ಲಿಯೇ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಜೀವ ರಕ್ಷಣೆ ಮಾಡಿದ್ದಾರೆ. ಸಿಬ್ಬಂದಿಗಳ ಸಕಾಲಿಕ ನೆರವಿಗೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅಭಿನಂದಿಸಿದ್ದಾರೆ.