ನನ್ನ ನೆಚ್ಚಿನ ನಾಯಕರಾಗಿರುವ ದೇವರಾಜ ಅರಸು ಹೆಸರಿನ ಪ್ರಶಸ್ತಿ ನನಗೆ ಬಂದಿರುವುದು ಅತೀವ ಸಂತೋಷ ಉಂಟು ಮಾಡಿದೆ ಎಂದು ಮಾಜಿ ಸಚಿವ ಹಾಗೂ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಕಾಗೋಡು ತಿಮ್ಮಪ್ಪ ತಿಳಿಸಿದರು.
ಇಲ್ಲಿನ ಜೋಸೆಫ್ ನಗರದಲ್ಲಿರುವ ತಮ್ಮ ಸ್ವಗೃಹದಲ್ಲಿ ಆನಂದಪುರಂ ಹೋಬಳಿ ಪರವಾಗಿ ಅಭಿಮಾನಿಗಳು ನೀಡಿದ ಅಭಿನಂದನೆಯನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ನಾನು ಮೊದಲ ಬಾರಿಗೆ ಶಾಸಕನಾಗಿದ್ದ ಸಂದ ರ್ಭದಲ್ಲಿ ಗೇಣಿ ರೈತರಿಗೆ ಭೂಮಿಹಕ್ಕು ಕೊಡಿಸಬೇಕು ಎನ್ನುವ ಸಂಕಲ್ಪ ಕೈಗೊಂಡಿದ್ದೇನು. ಅದಕ್ಕೆ ಪೂರಕ ವಾಗಿ ದೇವರಾಜ ಅರಸು ಅವರು ಮುಖ್ಯಮಂತ್ರಿ ಯಾಗಿದ್ದರು. ಅವರಿಗೆ ಗೇಣಿದಾರರ ಸ್ಥಿತಿಗತಿ ವಿವರಿಸಿದಾಗ ಅವರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರುವ ವಿಶೇಷ ಆಸಕ್ತಿ ವಹಿಸಿದ್ದರು. ಇದರಿಂದ ೧೯೭೨ರಲ್ಲಿ ಉಳುವವನೆ ಹೊಲದೊಡೆಯ ಕಾಯ್ದೆ ಜಾರಿಗೆ ಬಂದಿತ್ತು. ಅಂದಿನಿಂದ ಇಂದಿನವರೆಗೂ ಭೂಹೀನರಿಗೆ ಭೂಮಿ ಕೊಡಿಸುವ ನನ್ನ ಪ್ರಯತ್ನ ಮುಂದುವರೆದಿದೆ ಎಂದು ಹೇಳಿದರು.
ಆನಂದಪುರಂನ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಹೆಸರಿನ ಪ್ರಶಸ್ತಿ ಕಾಗೋಡು ತಿಮ್ಮಪ್ಪ ಅವರಿಗೆ ಸಂದಿರುವುದು ಹೆಚ್ಚು ಅರ್ಥಪೂರ್ಣವಾಗಿದ್ದು ಪ್ರಶಸ್ತಿಯ ಮೌಲ್ಯ ಹೆಚ್ಚಿದೆ. ರಾಜಕೀಯ ಬದುಕಿನುದ್ದಕ್ಕೂ ಭೂಹೀನರ ಪರವಾದ ಧ್ವನಿಯಾಗಿ ಕಾಗೋಡು ತಿಮ್ಮಪ್ಪನವರು ಕೆಲಸ ಮಾಡಿದ್ದಾರೆ. ಅರ್ಹರನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಕ್ಕೆ ಆನಂದಪುರಂ ಹೋಬಳಿಯ ಕಾಗೋಡು ಅಭಿಮಾನಿ ಗಳು ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಆನಂದಪುರಂ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮೋಹನ್ ಕುಮಾರ್, ಉಪಾಧ್ಯಕ್ಷೆ ರೂಪ, ಯಡೇಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷ ನಾರಿ ಲೋಕಪ್ಪ, ಗೌತಮಪುರ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಅಶೋಕ್, ಪ್ರಮುಖರಾದ ಭರ್ಮಪ್ಪ ಅಂದಾಸುರ, ಗಣಪತಿ ಇರುವಕ್ಕಿ, ಪರಮೇಶಿ ಕಣ್ಣೂರು, ನವೀನ ರವಿ ಗೌಡ, ನೇತ್ರಾವತಿ ಮಂಜುನಾಥ್ ಇದ್ದರು.