ಶಿವಮೊಗ್ಗ,ನ.10: ಪ್ರತಿಷ್ಠಿತ ಧಾರ್ಮಿಕ ಶ್ರದ್ಧಾಕೇಂದ್ರ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಸರಕಾರ ನೇಮಿಸಿರುವ ಮೇಲ್ವಿಚಾರಣಾ ಹಾಗೂ ಸಲಹಾ ಸಮಿತಿಯನ್ನು ತಕ್ಷಣ ರದ್ದು ಮಾಡಬೇಕೆಂದು ಸಿಗಂದೂರು ಉಳಿಸಿ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಆಗ್ರಹಿಸಲಾಯಿತು.
ಆರ್ಯಈಡಿಗ ಭವನದಲ್ಲಿ ನಡೆದ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸರಕಾರ ಸಮಿತಿ ರದ್ದು ಮಾಡಿ ಹಿಂದಿನಂತೆ ಧರ್ಮದರ್ಶಿ ರಾಮಪ್ಪ ಅವರ ಟ್ರಸ್ಟ್ ಅಡಿಯಲ್ಲಿ ಆಡಳಿತ ನಡೆಸಲು ಅನುವು ಮಾಡಿಕೊಡಬೇಕು. ಸಮಿತಿ ರದ್ದು ಮಾಡಲು ಸರಕಾರಕ್ಕೆ 15 ದಿನಗಳ ಗಡವು ನೀಡಲಾಗಿದೆ. ಸರಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರ ಗೌರವ ಅದ್ಯಕ್ಷತೆ ಮತ್ತು ಈಡಿಗ ಸಮಾಜದ ಗುರುಗುಳ ನೇತೃತ್ವದಲ್ಲಿ ಸಮಾಜದ ಸರ್ವಜಾತಿ ಹಾಗೂ ಸರ್ವ ಪಕ್ಷಗಳ ನೇತೃತ್ವದಲ್ಲಿ ಹೋರಾಟ ಮಾಡಲು ನಿರ್ಣಯಿಸಲಾಗಿದೆ ಎಂದು ಹೇಳಿದರು.
ಸಿಗಂದೂರು ದೇವಸ್ಥಾನ ಎಲ್ಲ ಜಾತಿಯ ಭಕ್ತರ ಧಾರ್ಮಿಕ ಅಸ್ಮಿತೆಯಾಗಿದೆ ಎಂಬ ಕಾರಣಕ್ಕೆ ದಲಿತ ಹಾಗೂ ಹಿಂದುಳಿದ ವರ್ಗದ ಎಲ್ಲ ಸಮುದಾಯಗಳ ಮುಖಂಡರು ಇಂದಿನ ಸಭೆಯಲ್ಲಿ ಭಾಗವಹಿಸಿದ್ದರು. ಸರಕಾರದ ಸಮಿತಿ ರದ್ದು ಮಾಡಲು ಒತ್ತಾಯಿಸುವ ಮತ್ತು ಬೀದಿಗಿಳಿದು ಹೋರಾಟ ಮಾಡಲು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ. ಈ ಹೋರಾಟವನ್ನು ರಾಜ್ಯ ಮಟ್ಟದ ಒಂದು ಆಂದೋಲನವಾಗಿ ರೂಪಿಸಲು ಸಭೆ ನಿರ್ಧಾರ ಕೈಗೊಂಡಿದೆ. ಈಡಿಗ-ಬಿಲ್ಲವ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಎಲ್ಲ ಹಿಂದುಳಿದ ಜಾತಿಗಳ ಸ್ವಾಮೀಜಿಗಳು. ಈಡಿಗ ಸಮುದಾಯವನ್ನು ಪ್ರತಿನಿಧಿಸುವ ಶಿವಮೊಗ್ಗ ಜಿಲ್ಲೆಯ ಶಾಸಕರುಗಳು, ಮಾಜಿ ಶಾಸಕರುಗಳು ಹಾಗೂ ಜಿಲ್ಲೆಯ ಎಲ್ಲ ಜಾತಿಗಳ ಮುಖಂಡರನ್ನು ಹೋರಾಟ ಸಮಿತಿ ಒಳಗೊಳ್ಳಬೇಕು. ಇಂದಿನ ಸಭೆಯ ನಿರ್ಣಯವನ್ನು ಮನವಿ ರೂಪದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಸಲ್ಲಿಸಬೇಕು. ಭಕ್ತರ ಭಾವನೆಗೆ ಗೌರವ ನೀಡಿ ಸರಕಾರ ಈಗಿನ ಸಮಿತಿ ಬರ್ಕಾಸ್ತುಗೊಳಿಸಬೇಕು. ಹಿಂದಿನಂತೆಯೇ ಸರಕಾರದ ಹಸ್ತಕ್ಷೇಪವಿಲ್ಲದೆ ದೇಗುಲದಲ್ಲಿ ಪೂಜಾವಿದಿವಿಧಾನಗಳು ನಡೆದುಕೊಂಡು ಹೋಗುವಂತೆ ಮಾಡಬೇಕು. ಕಾಗೋಡು ತಿಮ್ಮಪ್ಪ ಅವರ ಮಾರ್ಗದರ್ಶನದಲ್ಲಿ ತಕ್ಷಣವೇ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಸಭೆ ಮುಖಂಡರ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಕಿಮ್ಮನೆ ರತ್ನಾಕರ್ ಹೇಳಿದರು.
ಮಾಜಿ ಶಾಸಕ ಮಧುಬಂಗಾರಪ್ಪ ಮಾತನಾಡಿ, ಮುಜರಾಯಿಗೆ ಸೇರಿಸಲ್ಲ ಎಂದು ಸರಕಾರ ಹೇಳಿದೆಯಾದರೂ ಸಮಿತಿ ನೇಮಕ ಮಾಡಿರುವುದರ ಹಿಂದಿನ ಉದ್ದೇಶವೇನು ಎಂಬುದು ಅರ್ಥವಾಗುತ್ತಿಲ್ಲ. ಸಿಗಂದೂರು ದೇವಿಗೆ ರಾಜ್ಯ ಮತ್ತು ಹೊರದೇಶದಲ್ಲಿಯೂ ಭಕ್ತರಿದ್ದಾರೆ. ಅವರ ಭಾವನೆಗೆ ಧಕ್ಕೆ ತರಬಾರದು ಎಂದರು. ಸರಕಾರ ಜೇನುಗೂಡಿಗೆ ಕೈ ಹಾಕುವುದಿಲ್ಲ ಎಂಬ ಭರವಸೆ ಇನ್ನೂ ಇದೆ. ಸಮಿತಿ ರದ್ದಾಗದಿದ್ದಲ್ಲಿ ದೇವಿಯ ಭಕ್ತ ಸಮೂಹದೊಂದಿಗೆ ಸೇರಿ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಸಿಗಂದೂರು ಉಳಿಸಿ ಹೋರಾಟದ ಪೂರ್ವಭಾವಿ ಸಭೆಗೆ ಎಲ್ಲ ಹಿಂದುಳಿದ ಸಮಾಜಗಳೊಂದಿಗೆ ಒಕ್ಕಲಿಗೆ, ಲಿಂಗಾಯತ ಸಮಾಜದ ಮುಖಂಡರು ಬಂದಿದ್ದಾರೆ. ಅಂದರೆ ದೇವಿಯ ಎಲ್ಲ ಭಕ್ತರೂ ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಇದನ್ನು ಒಂದು ಆಂದೋಲನವಾಗಿ ಮಾಡಲಾಗುವುದು. ಎಲ್ಲ ಸಮಾಜಗಳ ಧಾರ್ಮಿಕ ನಾಯಕರನ್ನು, ಸ್ವಾಮೀಜಿಗಳನ್ನು ಮುಂದಿನ ಹೋರಾಟಕ್ಕೆ ಆಹ್ವಾನಿಸಲಾಗುವುದು. ಅದೇ ರೀತಿ ಸಾಗರ, ಸೊರಬ ಕ್ಷೇತ್ರದ ಶಾಸಕರನ್ನು ಹೋರಾಟ ಸಮಿತಿಯ ಭಾಗವಾಗಿಸಬೇಕೆಂದು ಕಿಮ್ಮನೆ ರತ್ನಾಕರ್ ಹೇಳಿದ್ದು, ಎಲ್ಲರನ್ನೂ ಕೂಡಿಕೊಂಡೇ ಹೋರಾಟ ಮಾಡುವುದಾಗಿ ಘೋಷಿಸಿದರು.
ಮಾಜಿ ಶಾಸಕಿ ಶಾರದಾ ಪೂರ್ಯನಾಯ್ಕ, ಡಾ.ಜಿ.ಡಿ. ನಾರಾಯಣಪ್ಪ, ಹಿಂದೂಪರ ಹೋರಾಟಗಾರ ಮಂಗಳೂರಿನ ಸತ್ಯಜಿತ್ ಸೂರತ್ಕಲ್, ಮಡಿವಾಳ ಸಮಾಜದ ರಾಜು ತಲ್ಲೂರ್, ದೇವಾಂಗ ಸಮಾಜ ಗಿರಿಯಪ್ಪ, ಸಾಧುಶೆಟ್ಟಿ ಸಮುದಾಯದ ಎನ್.ರಮೇಶ್, ಕುರುಬ ಸಮಾಜದ ಗೋಣಿ ಮಾಲತೇಶ್,ಮುಖಂಡರಾದ ಕಲಗೋಡು ರತ್ನಾಕರ್, ಬಂಡಿ ರಾಮಚಂದ್ರ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಳಕ ಗುರುಮೂರ್ತಿ, ಪ್ರಗತಿಪರ ಹೋರಾಟಗಾರ ಕೆ.ಪಿ.ಶ್ರೀಪಾಲ್, ಶಿರಸಿಯ ಈಡಿಗ ಸಮಾಜದ ಮುಖಂಡ ಭೀಮಣ್ಣನಾಯ್ಕ, ಹುಲ್ತಿಕೊಪ್ಪ ಶ್ರೀಧರ್, ಮಂಜುನಾಥ್ ನಾಯ್ಕ,ಹಿಂದುಳಿತ ಜಾತಿಗಳ ಒಕ್ಕೂಟದ ವಿ.ರಾಜು, ಸೇರಿದಂತೆ ಅನೇಕ ಸಮುದಾಯದ ಮುಖಂಡರು ಭಾಗವಹಿಸಿದ್ದರು.ಹಲವು ಆದರೆ ಅಲ್ಲಿ ಸಮಿತಿ ನೇಮಕ ಮಾಡಿದೆ. ಇದರ ಹಿಂದೆ ಷಡ್ಯಂತ್ರ ಇದ್ದಂತಿದೆ.
ಸರ್ವಜಾತಿ ಮುಖಂಡರ ಬೆಂಬಲ
ಇದಕ್ಕೂ ಮೊದಲು ನಡೆದ ಸಭೆಯಲ್ಲಿ ಶಿವಮೊಗ್ಗ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳ ವಿವಿಧ ಜಾತಿಯ ಮುಖಂಡರು ಭಾಗವಹಿಸಿದ್ದರು. ರಾಜ್ಯದಲ್ಲಿ ಅನೇಕ ದೇಗುಲಗಳು ಖಾಸಗಿ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿವೆ. ಎಲ್ಲ ಬಿಟ್ಟು ಸಿಗಂದೂರು ದೇವಿ ದೇಗುಲಕ್ಕೆ ಸಲಹಾ ಸಮಿತಿ ರಚಿಸಿರುವುದು ಸರಿಯಲ್ಲ. ಹಿಂದುಳಿದವರು ,ದಲಿತರು ದೇಗುಲ ಕಟ್ಟಬೇಕು ಮೇಲ್ವರ್ಗದವರು ಬಂದು ಆಳ್ವಿಕೆ ಮಾಡುವ ಸ್ಥಿತಿ ಎಲ್ಲೆನಿರ್ಮಾಣವಾಗಿದೆ. ಅಭಿವೃದ್ಧಿ ಹೊಂದದ ದೇಗುಲಗಳನ್ನು ಸರಕಾರ ಮುಜರಾಯಿಗೆ ವಹಿಸಲಿ. ಆದರೆ ರಾಮಪ್ಪ ಅವರು ಶ್ರಮಪಟ್ಟು ಬೆಳೆಸಿದ ದೇವಾಲಯಕ್ಕೆ ಸಮಿತಿ ಮಾಡುವುದು ಸರಿಯಲ್ಲ ಎಂದರು. ಸಿಗಂದೂರು ಚೌಡಮ್ಮ ದೇವಸ್ಥಾನಕ್ಕೆ ಎಲ್ಲ ಸಮುದಾಯದ ಭಕ್ತರು ನಡೆದುಕೊಳ್ಳುತ್ತಾರೆ ನಾವೆಲ್ಲರೂ ಸಿಂಗಂದೂರು ಉಳಿಸಿ ಆಂದೋಲನಕ್ಕೆ ಬೆಂಬಲ ನೀಡುತ್ತೇವೆ ಎಂದು ಏಕಮತದ ನಿರ್ಣಯ ಕೈಗೊಂಡರು.
ಸಭೆಯಲ್ಲಿ ಈಡಿಗ, ಬಿಲ್ಲವ, ಲಿಂಗಾಯತ, ಒಕ್ಕಲಿಗ, ಕುರುಬ, ಉಪ್ಪಾರ, ದೇವಾಂಗ, ಮಡಿವಾಳ, ಬಣಜಾರ, ಮರಾಠ, ಉಪ್ಪಾರ, ದಲಿತ, ಕುಂಚಟಿಗ, ವಾಲ್ಮೀಕಿ, ಸವಿತಾ ಸಮಾಜ ,ಸಾಧುಶೆಟ್ಟಿ,ಸೇರಿದಂತೆ ಅನೇಕ ಜಾತಿಯ ಮುಖಂಡರುಗಳು ಭಾಗವಹಿಸಿದ್ದರು. ಪ್ರಮುಖರಾದ ಶಿವಮೊಗ್ಗ ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಎಚ್.ಸಿ.ಯೋಗಿಶ್, ಪಾಲಾಕ್ಷಿ, ಗೀತಾಂಜಲಿ ದತ್ತಾತ್ರೇಯ, ಭುಜಂಗಯ್ಯ, ಪ್ರವೀಣ್ ಹಿರೇಗೋಡು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. ಹುಲ್ತಿಕೊಪ್ಪ ಶ್ರೀಧರ್ ಸ್ವಾಗತಿಸಿದರು. ಜಿ.ಡಿ.ಮಂಜುನಾಥ್, ತೇಕಲೆ ರಾಜಪ್ಪ ಕಾರ್ಯಕ್ರಮ ನಿರ್ವಹಿಸಿದರು.