ಶಿವಮೊಗ್ಗ: ಭಾರತೀಯ ಆಯುರ್ವೇದ ಪದ್ಧತಿಗೆ ವಿಶ್ವದಲ್ಲಿ ವಿಶೇಷ ಸ್ಥಾನವಿದ್ದು, ಕರೊನಾ ಸಂದರ್ಭದಲ್ಲಿ ಆಯುರ್ವೇದದ ಮಹತ್ವ ಪ್ರತಿಯೊಬ್ಬರ ಅರಿವಿಗೂ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ವಿನಾಯಕ ನಗರ ನಿವಾಸಿಗಳ ಸಂಘ ಹಾಗೂ ನಿಸರ್ಗ ಸಂಜೀವಿನಿ ಸೋಷಿಯಲ್ ಆಂಡ್ ವೆಲ್‌ಫೇರ್ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಉಚಿತ ಆಯುರ್ವೇದ ಆರೋಗ್ಯ ತಪಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಆಯುರ್ವೇದ ಪದ್ಧತಿ ಬಗ್ಗೆ ಮತ್ತೆ ದೇಶದಲ್ಲಿ ಕಾಳಜಿ ಉಂಟಾಗುತ್ತಿದ್ದು, ಎಲ್ಲರೂ ಆಯುರ್ವೇದಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಕರೊನಾ ಸಂದರ್ಭದಲ್ಲಿ ದೇಶದ ಕೋಟ್ಯಾಂತರ ಜನರು ಆಯುರ್ವೇದ ಪದ್ಧತಿ ಅನುಸರಿಸದ ಪರಿಣಾಮ ಕರೊನಾದಿಂದ ದೂರ ಉಳಿದರು ಎನ್ನಲಾಗಿದೆ. ಆಯುರ್ವೇದಿಕ್ ಪದ್ಧತಿಯು ಅತ್ಯಂತ ಸುರಕ್ಷಿತ ಕ್ರಮವಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಕಾಲಘಟ್ಟದಲ್ಲಿ ಆಯುರ್ವೇದ ಮತ್ತು ಯೋಗ ಪ್ರತಿಯೊಬ್ಬ ಮನುಷ್ಯನಿಗೆ ಅತ್ಯಂತ ಅವಶ್ಯಕವಾಗಿರುವ ಮಹತ್ವದ ಅಂಶಗಳು. ಎಲ್ಲರೂ ದಿನ ನಿತ್ಯ ಯೋಗಾಭ್ಯಾಸ ಮಾಡಬೇಕು. ಆರೋಗ್ಯಯುತ ಮತ್ತು ಮಾನಸಿಕ ಸದೃಢ ಚಿಂತನೆಯ ಜೀವನಕ್ಕೆ ಯೋಗ ಮತ್ತು ಆಯುರ್ವೇದ ಸಹಕಾರಿ ಎಂದರು.
ಜನರ ಆರೋಗ್ಯ ಮತ್ತು ಸುರಕ್ಷತೆ ದೃಷ್ಠಿಯಿಂದ ಮಾಡುವ ಪ್ರತಿಯೊಂದು ಕಾರ್ಯವು ಶ್ರೇಷ್ಠ ಕೆಲಸ. ವಿನಾಯಕ ನಗರ ನಿವಾಸಿಗಳ ಸಂಘವು ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುವ ಮೂಲಕ ಎಲ್ಲ ಸಂಘ ಸಂಸ್ಥೆಗಳಿಗೂ ಮಾದರಿ ಎನಿಸುವ ಕೆಲಸ ಮಾಡಿದೆ. ನಗರದ ಎಲ್ಲ ಸಂಘ ಸಂಸ್ಥೆಗಳು ಸಮಾಜಮುಖಿ ಮತ್ತು ಜನರ ಆರೋಗ್ಯ ದೃಷ್ಠಿಯಿಂದ ಕಾರ್ಯಕ್ರಮ ಆಯೋಜಿಸಬೇಕು ಎಂದು ಹೇಳಿದರು.
ರಾಜ್ಯ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ವಿನಾಯಕ ನಗರ ನಿವಾಸಿಗಳ ಸಂಘದ ಅಧ್ಯಕ್ಷ ಡಿ.ಎಸ್.ಅರುಣ್ ಮಾತನಾಡಿ, ನಿವಾಸಿಗಳ ಸಂಘ ಮೂರು ವರ್ಷಗಳಿಂದಲೂ ನಿರಂತರವಾಗಿ ಆರೋಗ್ಯ ಶಿಬಿರ, ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ವಿನಾಯಕ ನಗರದ ೪೦೦ಕ್ಕೂ ಹೆಚ್ಚು ಜನರಿಗೆ ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಿಸಲಾಗಿದೆ ಎಂದು ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಸಂಘದ ವತಿಯಿಂದ ಬಡ ಮತ್ತು ಕಷ್ಟದಲ್ಲಿರುವ ಕುಟಂಬದವರಿಗೆ ತರಕಾರಿ ಮತ್ತು ದಿನಸಿ ಕಿಟ್‌ಗಳನ್ನು ವಿತರಿಸಲಾಗಿದೆ. ಕೃಷಿಕರಿಂದ ನೇರವಾಗಿ ಖರೀದಿಸಿ ತರಕಾರಿ ವಿತರಿಸುವ ಕೆಲಸ ನಡೆಯಿತು. ಕರೊನಾ ಜಾಗೃತಿ ಜತೆಯಲ್ಲಿ ಆರೋಗ್ಯ ಸುರಕ್ಷತೆ ಬಗ್ಗೆ ನಿರಂತರ ಕಾಳಜಿ ವಹಿಸುವ ಕೆಲಸ ಸಂಘದಿಂದ ನಡೆಯುತ್ತಿದೆ. ಇನ್ನು ಮುಂದೆ ಪ್ರತಿ ತಿಂಗಳು ಆಯುರ್ವೇದ ತಪಾಸಣಾ ಶಿಬಿರ ನಡೆಸುವ ಉದ್ದೇಶವಿದೆ ಎಂದರು.
ಸೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಪಾಲಿಕೆ ಸದಸ್ಯೆ ಆರತಿ ಪ್ರಕಾಶ್, ಮಾಜಿ ಸದಸ್ಯರಾದ ಸತೀಶ್, ಪ್ರೇಮಾ ಆನಂದ್, ನವ್ಯಶ್ರೀ ನಾಗೇಶ್, ಡಾ. ಹರಿಕರಷ್ಣನ್, ಡಾ. ಭೂಮಿಕಾ ರತ್ನಾಕರ್, ವಿನಾಯಕ ನಗರ ನಿವಾಸಿಗಳ ಸಂಘದ ಕಾರ್ಯದರ್ಶಿ ಎಸ್.ಪಿ.ದಿನೇಶ್ ಶೇಟ್ ಮತ್ತಿತರರು ಉಪಸ್ಥಿತರಿದ್ದರು.