ಸಾಗರ : ಆಗಸ್ಟ್ ೬ರಂದು ಅಡಿಕೆ ಪರಿಷ್ಕರಣೆ ಮತ್ತು ಮಾರಾಟ ಸಹಕಾರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮ ಬೆಳಿಗ್ಗೆ ೧೦-೩೦ಕ್ಕೆ ವರದಹಳ್ಳಿ ರಸ್ತೆಯ ಈಡಿಗರ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಸಂಸ್ಥೆ ಅಧ್ಯಕ್ಷ ಕೆ.ಎಂ.ಸೂರ್ಯನಾರಾಯಣ ಖಂಡಿಕಾ ತಿಳಿಸಿದರು.
ಬುಧವಾರ ಸಂಸ್ಥೆಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ೧೯೭೩ರಲ್ಲಿ ಪ್ರಾಂತ್ಯದ ಅಡಿಕೆ ಬೆಳೆಗಾರರ ಹಿತರಕ್ಷಣೆಗಾಗಿ ಸ್ಥಾಪಿತವಾಗಿದ್ದ ಆಪ್ಸ್‌ಕೋಸ್ ಸುವರ್ಣ ಮಹೋತ್ಸವ ಆಚರಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ ಎಂದು ಹೇಳಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಚಿನ್ನದ ಹೆಜ್ಜೆ ಸ್ಮರಣ ಸಂಚಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬಿಡುಗಡೆ ಮಾಡಲಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಸುವರ್ಣ ಮಹೋತ್ಸವ ಗಿಫ್ಟ್ ಕೂಪನ್ ಬಿಡುಗಡೆ ಮಾಡಲಿದ್ದು, ನೂತನ ಆಡಳಿತ ಕಚೇರಿಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಲೋಕಾರ್ಪಣೆ ಮಾಡಲಿದ್ದು, ಶಾಸಕ ಅರಗ ಜ್ಞಾನೇಂದ್ರ ಸುವರ್ಣ ಮಹೋತ್ಸವ ನೆನಪಿನ ಕೊಡುಗೆ ವಿತರಣೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಹರತಾಳು ಹಾಲಪ್ಪ,
ಕುಮಾರ ಬಂಗಾರಪ್ಪ, ಮಾಜಿ ಶಾಸಕ ಬಿ.ಸ್ವಾಮಿರಾವ್ ಸೇರಿದಂತೆ ಸಹಕಾರ ವಿವಿಧ ಸಹಕಾರ ಸಂಸ್ಥೆಯ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
೧೯೭೩ರ ಡಿಸೆಂಬರ್‌ನಲ್ಲಿ ೫೯೨ ಸದಸ್ಯ ಬಲ ಹಾಗೂ ೯೦ಸಾವಿರ ರೂ. ಷೇರು ಬಂಡವಾಳದೊಂದಿಗೆ ಆಪ್ಸ್‌ಕೋಸ್ ಸಂಸ್ಥೆ ಪ್ರಾರಂಭ ಮಾಡಲಾಯಿತು. ಎಲ್.ಟಿ.ತಿಮ್ಮಪ್ಪ, ಅಡೇಮನೆ ಗೋಪಾಲಯ್ಯ, ಎ.ಎಚ್.ಚೆನ್ನವೀರಪ್ಪ, ಯು.ಮಹಾಬಲ ರಾವ್, ಪಿ.ಎಸ್.ರಾಮಪ್ಪ, ಎಂ.ಹರನಾಥ ರಾವ್, ಎಚ್.ಎ.ಪ್ರಭಾಕರ ರಾವ್, ಎಚ್.ಎಸ್.ಚಂದ್ರಶೇಖರಪ್ಪ,
ಸಿ.ಎಂ.ಶ್ರೀಕಂಠಯ್ಯ, ಟಿ.ಎಸ್.ಚಂದ್ರಶೇಖರ್, ಶ್ರೀನಿವಾಸ್ ಭಟ್, ಎಚ್.ಕೆ.ಎಸ್.ವೆಂಕಟಗಿರಿ ರಾವ್, ಎಸ್.ವಿ.ನಾರಾಯಣಪ್ಪ, ವಿ.ನಾ.ಕೃಷ್ಣಮೂರ್ತಿ, ಸುಬ್ರಹ್ಮಣ್ಯ ಉಡುಪ, ಕೆ.ಎಸ್.ನಾರಾಯಣ ರಾವ್, ಕೆ.ಎಸ್. ಹೆಗಡೆ ಸೇರಿದಂತೆ ಈತನಕ ಸಹಕಾರಿಗಳ ಶ್ರಮ ಆಪ್ಸ್‌ಕೋಸ್ ಬೆಳವಣಿಗೆಯಲ್ಲಿದೆ. ಸಾಗರ ಸೊರಬ ಹೊಸನಗರ ತಾಲ್ಲೂಕಿನ ಬೆಳೆಗಾರರ ಜನನಾಡಿಯಾಗಿ ಕೆಲಸ ಮಾಡುತ್ತಿರುವ ಆಪ್ಸ್‌ಕೋಸ್ ಸಂಸ್ಥೆ ೧.೬೫ ಕೋಟಿ ಷೇರು ಬಂಡವಾಳ ಹೊಂದಿದೆ. ೫೯.೫೬ ಕೋಟಿ ರೂ. ಠೇವಣಿ ಹೊಂದಿದ್ದು ಸುಮಾರು ೩೦ ಕೋಟಿ ರೂ. ಸಾಲ ವಿತರಿಸಿದೆ ಎಂದರು.
ಸಾಗರದಲ್ಲಿ ಕೇಂದ್ರ ಕಚೇರಿ ಇದ್ದು, ಹೊಸನಗರ, ನಿಟ್ಟೂರು, ತುಮರಿಯಲ್ಲಿ ಶಾಖೆಗಳನ್ನು ಹೊಂದಿದೆ. ಸಾಗರದಲ್ಲಿ ಕೃಷಿ ಮಳಿಗೆ ಸ್ಥಾಪಿಸಿ ರೈತರಿಗೆ ಕಡಿಮೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಪೂರೈಕೆ ಮಾಡುತ್ತಿದೆ. ೪.೧೮ ಕೋಟಿ ರೂ. ಆರ್ಥಿಕ ವರ್ಷದಲ್ಲಿ ಲಾಭ ಗಳಿಸಿದ್ದು, ಶೇ. ೧೦ ಡಿವಿಡೆಂಡ್ ನೀಡಿದೆ. ಸುವರ್ಣ ಮಹೋತ್ಸವ ವರ್ಷದಲ್ಲಿ ಷೇರುದಾರಸ್ನೇಹಿ ಅನೇಕ ಯೋಜನೆಗಳನ್ನು ಅನುಷ್ಟಾನಕ್ಕೆ ತರಲು ಚಿಂತನೆ ನಡೆಸಿದೆ. ನೂತನ ಕಚೇರಿಯನ್ನು ೧.೫೦ ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಸಾಗರ ಬಸ್ ನಿಲ್ದಾಣದಿಂದ ಸಭಾಭವನವರೆಗೆ ಬಸ್ ವ್ಯವಸ್ಥೆಯನ್ನು
ಕಲ್ಪಿಸಲಾಗಿದೆ ಎಂದು ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷ ಎ.ಓ. ರಾಮಚಂದ್ರ, ನಿರ್ದೇಶಕರಾದ ಬಿ.ಎ.ಇಂದೂಧರ, ಕೆ.ಎಸ್.ಸುಬ್ರಾವ್, ಪಿ.ಎನ್.ಸುಬ್ರಾವ್, ಬಿ.ಆರ್.ಶೇಷಗಿರಿ, ಎಚ್.ಬಿ.ಕಲ್ಯಾಣಪ್ಪ ಗೌಡ, ಹೆಚ್.ಓಮಕೇಶ್, ಎಚ್.ಕೆ.ರಾಘವೇಂದ್ರ, ಕಟ್ಟಿನಕೆರೆ ಸೀತಾರಾಮಯ್ಯ, ಎ.ಎಸ್.ನಾಗರತ್ನ, ಜಾನಕಮ್ಮ, ಎಂ.ಎಂ.ಯುವರಾಜ್, ಕೆ.ಎಂ.ಸತ್ಯನಾರಾಯಣ್, ಗುರುಪಾದ ಬಿ. ಕೆರೆಮನೆ, ಕಾರ್ಯದರ್ಶಿ ಲಂಬೋಧರ ಎಚ್.ಎನ್. ಹಾಜರಿದ್ದರು.