ವಿಶೇಷ ವರದಿ: ಸ್ವಾಮಿ
ಶಿವಮೊಗ್ಗ, ಅ.27:
ಶಿವಮೊಗ್ಗ ಪ್ರವಾಸೋದ್ಯಮ ಇಲಾಖೆಗೆ ತಲೆ ಇಲ್ಲ ಎಂಬುದಕ್ಕೆ ಶಿವಮೊಗ್ಗ ಹೊನ್ನಾಳಿ ರಸ್ತೆಯ ನಗರಕ್ಕೆ ಸಮೀಪದ ತೇವರ ಚಟ್ನಳ್ಳಿ ಬಳಿಯಲ್ಲಿ ಹಾಕಿರುವ ಫ್ಲಕ್ಸಿಯೊಂದು ಸಾಕ್ಷಿ ನೀಡುತ್ತದೆ.
ಶಿವಮೊಗ್ಗ ನಗರದ ಹೃದಯ ಭಾಗದಿಂದ ಸುಮಾರು ೪ ಕಿಲೋ ಮೀ ದೂರದಲ್ಲಿ ಹಾಕಿರುವ ಈ ಫ್ಲೆಕ್ಸಿಯಲ್ಲಿ ಮಲೆನಾಡಿನ ತೊಟ್ಟಿಲು ಶಿವಮೊಗ್ಗಕ್ಕೆ ಸ್ವಾಗತ ಕೋರಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಿಂಹಧಾಮ, ಗಾಜನೂರು, ಕೂಡ್ಲಿ ಸೇರಿದಂತೆ ಪ್ರಮುಖ ಪ್ರವಾಸೋದ್ಯಮ ಪ್ರದೇಶಗಳಿಗೆ ಹೋಗಿ ಬರಲು ದಾರಿ ಅಳತೆಯ ಸೂಚನೆಯನ್ನು ನೀಡಿದೆ.
ಈ ಪ್ರವಾಸೋದ್ಯಮ ಇಲಾಖೆ ಅದೆಷ್ಟು ಬುದ್ದಿವಂತ ಅಧಿಕಾರಿಗಳನ್ನು ಹೊಂದಿದೆ ನೋಡಿ. ಶಿವಮೊಗ್ಗ ನಗರದಲ್ಲೇ ಇರುವ ಶಿವಪ್ಪನಾಯ್ಕ ಅರಮನೆ ಈ ಬೋರ್ಡ್ ಹಾಕಿರುವ ಜಾಗದಿಂದ ಕೇವಲ 5 ಕಿ.ಮೀ.ನಲ್ಲಿ ಸಿಗುತ್ತದೆಯಾದರೂ ಸಹ ಇವರಲ್ಲಿ ಹಾಕಿರುವುದು 42 ಕಿ.ಮೀ. ಅಬ್ಬಾ ಎಲ್ಲಿಂದ ಯಾವಾಗ ಹೇಗೆ ಅಳತೆ ಮಾಡಿದರೋ ಭಗವಂತನೆ ಬಲ್ಲ. ತೇವರ ಚಟ್ನಳ್ಳಿಯಿಂದ ಸರಿಯಾಗಿ ಶಂಕರಮಠ ರಸ್ತೆ ಮೂಲಕ ಬಂದರೆ ಕೇವಲ ೪ರಿಂದ 5 ಕಿ.ಮೀ. ದೂರದ ಶಿವಪ್ಪನಾಯ್ಕ ಅರಮನೆಗೆ ಇವರು ಹಾಕಿರುವ ದೂರ 42 ಕಿ.ಮೀ. ಎಂದಾಗಿರುವುದನ್ನು ಗಮನಿಸಿದಾಗ ಇವರ ಪೆದ್ದುತನ, ದಡ್ಡತನ ಅತ್ಯಂತ ಸೂಕ್ಷ್ಮವಾಗಿ ಗೊತ್ತಾಗುತ್ತದೆಯಲ್ಲವೇ.?
ಇಲ್ಲಿ ಹಾಕಿರುವ 6ಪ್ರವಾಸಿ ಕೇಂದ್ರಗಳ ದೂರದ ಲೆಕ್ಕ ಅದ್ಯಾವ ಮೂಡಿನಲ್ಲಿ ಹಾಕಿದರೋ, ಯಾವಾಗ ಪ್ರವಾಸ ಹೋಗಿದ್ದರೋ ಭಗವಂತನೇ ಬಲ್ಲ. ಸುಮಾರು 15 ಕಿ.ಮೀ. ದೂರದ ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಇವರು ಹಾಕಿರುವ ದೂರದ ಲೆಕ್ಕ 44 ಕಿ.ಮೀ. ಸುಮಾರು 16 ಕಿ.ಮೀ. ದೂರದ ಗಾಜನೂರು ಅಣೆಕಟ್ಟಿಗೆ ಇವರು ಯಾವ ಸ್ಕೇಲಿನಲ್ಲಿ ಅಳತೆ ಮಾಡಿದರೋ ಭಗವಂತನಿಗೆ ಗೊತ್ತು. ಹಾಕಿರುವ ದೂರ ಮಾತ್ರ 56 ಕಿ.ಮೀ. ಸುಮಾರು 20 ರಿಂದ 25 ಕಿ.ಮೀ.ನೊಳಗೆ ಸಿಗುವ ತುಂಗಾ-ಭದ್ರೆಯರ ಅಂಗಳ ಕೂಡ್ಲಿ ಇವರ ಲೆಕ್ಕದಲ್ಲಿ 46 ಕಿ.ಮೀ. ದುರಂತವೆಂದರೆ, ಶಿಕಾರಿಪುರ ತಾಲೂಕಿನ ಉಡುತಡಿ ಮಾತ್ರ ಇವರ ಲೆಕ್ಕದಲ್ಲಿ 49 ಕಿ.ಮೀ. ತಾಳಗುಂದ 60 ಕಿ.ಮೀ., ಉಡುತಡಿಗಿಂತ ಶಿವಪ್ಪ ನಾಯಕ ಅರಮನೆ, ತಾವರೆಕೊಪ್ಪ ಸಿಂಹಧಾಮ, ಗಾಜನೂರು ದೂರ ಎಂಬುದಾದರೆ ಈ ಪ್ರವಾಸೋದ್ಯಮ ಇಲಾಖೆಯಲ್ಲಿರುವ ಬುದ್ದಿವಂತ ಅಧಿಕಾರಿಗಳ, ನೌಕರರ ಕಾರ್ಯದಕ್ಷತೆಯನ್ನು ಮೆಚ್ಚಿ ಅಹುದವುದೆನ್ನಬೇಕು !