ಸಾಗರ : ಅಭಿವೃದ್ದಿ ಹೆಸರಿನಲ್ಲಿ ಪಶ್ಚಿಮಘಟ್ಟಕ್ಕೆ ಲಗ್ಗೆ ಹಾಕಿ ಪರಿಸರ ಸಮತೋಲನವನ್ನು ನಾಶಪಡಿಸಲಾಗುತ್ತಿದೆ ಎಂದು ಪರಿಸರತಜ್ಞ ಪ್ರೊ. ಎಂ.ಬಿ.ಕುಮಾರಸ್ವಾಮಿ ತಿಳಿಸಿದರು.
ಇಲ್ಲಿನ ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಸಾರಾ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಹ್ಯಾದ್ರಿ ಸಂವಾದ ಸಂಚಾರಿ ಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಾಧವ ಗಾಡ್ಗಿಳ್ ವರದಿ ಶೇ. ೭೫ರಷ್ಟು ಪರಿಸರವನ್ನು ಉಳಿಸುವ ಮಾಹಿತಿ ನೀಡಿದ್ದರೇ, ಕಸ್ತೂರಿ ರಂಗನ್ ವರದಿ ಶೇ. ೨೫ರಷ್ಟು ಪಶ್ಚಿಮಘಟ್ಟದ ಅಸ್ತಿತ್ವ ಉಳಿಸುವ ವರದಿ ನೀಡಿತ್ತು. ಆದರೆ ನಮ್ಮನ್ನಾಳುವ ರಾಜಕಾರಣಿಗಳಿಗೆ ಪರಿಸರ ಉಳಿಸುವ ಬಗ್ಗೆ ಆಸಕ್ತಿ ಇಲ್ಲ. ಪಶ್ಚಿಮಘಟ್ಟದಲ್ಲೀಗ ಅಡಿಕೆ ತೋಟ, ರಬ್ಬರ್ ಪ್ಲಾಂಟೇಶನ್ ಸೇರಿದಂತೆ ವಿವಿಧ ಚಟುವಟಿಕೆಗಳು ನಡೆಯುತ್ತಿದೆ.
ಪಶ್ಚಿಮಘಟ್ಟವನ್ನು ಉಳಿಸಿಕೊಳ್ಳಲು ವಿಫಲವಾಗಿರುವ ನಾವು ಮಳೆಗಾಲ ಪ್ರಾರಂಭವಾದರೂ ಮಳೆ ಬಂದಿಲ್ಲ ಎಂದು ತಲೆಮೇಲೆ ಕೈಹೊತ್ತು ಕುಳಿತಿದ್ದೇವೆ ಎಂದರು.
ಜಗತ್ತಿನ ೩೪ ಪರಿಸರ ಸೂಕ್ಷ್ಮ ಪ್ರದೇಶವಿದ್ದು ಭಾರತದಲ್ಲಿ ಎರಡನ್ನು ಗುರುತಿಸಲಾಗಿದೆ. ಈ ಪೈಕಿ ಪಶ್ಚಿಮಘಟ್ಟ ಸಹ ಒಂದಾಗಿದೆ. ಕರ್ನಾಟಕ ರಾಜ್ಯದಲ್ಲಿ ಶೇ. ೬೦ರಷ್ಟು ಪಶ್ಚಿಮಘಟ್ಟ ಹರಡಿಕೊಂಡಿದೆ. ವಿಶ್ವಸಂಸ್ಥೆಯ ಪಾರಂಪರಿಕಾ ಪರಿಸರ ಸೂಕ್ಷ್ಮ ತಾಣಗಳಲ್ಲಿ ಗುರುತಿಸಿಕೊಂಡಿರುವ ಪಶ್ಚಿಮಘಟ್ಟವನ್ನು ಉಳಿಸಿಕೊಂಡು ಹೋಗುವ ಮಹತ್ತರ ಹೊಣೆಗಾರಿಕೆ ಎಲ್ಲರ ಮೇಲೆ ಇದೆ. ಒಂದರ್ಥದಲ್ಲಿ ಪಶ್ಚಿಮಘಟ್ಟ ಹಿಮವಿಲ್ಲದ ಹಿಮಾಲಯವಿದ್ದಂತೆ. ಜೀವವೈವಿಧ್ಯತೆ, ಔಷಧೀಯ ಸಸ್ಯಗಳ ತಾಣವಾಗಿರುವ ಸಹ್ಯಾದ್ರಿ ಶ್ರೇಣಿ ಬಗ್ಗೆ ಯುವಜನರು ಆಸಕ್ತಿ ವಹಿಸಿಕೊಳ್ಳಬೇಕು. ದಕ್ಷಿಣ ಭಾರತದ ಅಮೂಲ್ಯ ಸಂಪತ್ತಾಗಿರುವ ಪಶ್ಚಿಮಘಟ್ಟ ಕುರಿತು ಸಾರಾ ಸಂಸ್ಥೆ ಆಯೋಜಿಸಿರುವ ಚಿತ್ರ ಪ್ರದರ್ಶನ ಪರಿಸರ ಕಾಳಜಿ ಬೆಳೆಸುವಲ್ಲಿ ಪೂರಕವಾಗಿದೆ ಎಂದು ಹೇಳಿದರು.
ಚಲನಚಿತ್ರ ನಟ ಯೇಸುಪ್ರಕಾಶ್ ಮಾತನಾಡಿ, ಸಹ್ಯಾದ್ರಿ ಸಂವಾದ ಸಂಚಾರಿ ಚಿತ್ರ ಪ್ರದರ್ಶವನ್ನು ತಾಲ್ಲೂಕಿನ ೧೫೦ಕ್ಕೂ ಹೆಚ್ಚು ಶಾಲಾ ಕಾಲೇಜುಗಳಲ್ಲಿ ಪ್ರದರ್ಶನ ಮಾಡಿ ಯುವಜನರಲ್ಲಿ ಸಹ್ಯಾದ್ರಿ ಸಿರಿಯ ಮಹತ್ವ ತಿಳಿಸುವ ಉದ್ದೇಶ ಸಾರಾ ಸಂಸ್ಥೆ ಹೊಂದಿದೆ. ಪರಿಸರ ಸಮತೋಲನ ತಪ್ಪುತ್ತಿರುವ ಈ ಸಂಕೀರ್ಣ ಕಾಲಘಟ್ಟದಲ್ಲಿ ಯುವಪೀಳಿಗೆಯ ಮನಸ್ಸಿನಲ್ಲಿ ಪರಿಸರ ಕಾಳಜಿ ಮೂಡಿಸದೆ ಹೋದಲ್ಲಿ ಮುಂದೆ ಇನ್ನಷ್ಟು ಪರಿಸರ ಮಾರಕ ಚಟುವಟಿಕೆಗಳು ನಡೆಯುವ ಸಾಧ್ಯತೆ ಇದೆ. ನಮ್ಮ ನಡುವೆ ಇರುವ ಅದ್ಭುತವಾದ ಸಹ್ಯಾದ್ರಿ ಶ್ರೇಣಿ ಮಹತ್ವ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಚಿತ್ರ ನೋಡುವ ಜೊತೆಗೆ ಯುವಜನರು ಸಾಮೂಹಿಕ ಪರಿಸರ ಜಾಗೃತಿ ಹೊಣೆಯನ್ನು ನಿಭಾಯಿಸಬೇಕು ಎಂದು ಹೇಳಿದರು.
ಸಸ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶಿವಾನಂದ್ ಎಸ್. ಭಟ್ ಮಾತನಾಡಿದರು. ಪ್ರಾಚಾರ್ಯೆ ಪ್ರೊ. ರಾಜೇಶ್ವರಿ ಎಚ್. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಡಾ. ಜಿ.ಸಣ್ಣಹನುಮಪ್ಪ, ಡಾ. ಗಿರೀಶ್ ಜನ್ನೆ, ಅರುಣಕುಮಾರ್, ಪ್ರೊ. ಕೆ.ಎನ್.ಮಹಾಬಲೇಶ್ವರ, ಡಾ. ಸೋಮಶೇಖರ್, ಎಂ.ಜಿ.ಅಂದಣ್ಣನವರ್, ಪ್ರೊ. ಚಂದ್ರಶೇಖರ್, ದೀಪಾ ಇನ್ನಿತರರು ಉಪಸ್ಥಿತರಿದ್ದರು. \