ಶಿವಮೊಗ್ಗ,ಜೂ.19:
10 ಕೆ.ಜಿ ಅಕ್ಕಿ ಕೊಡುವ ಗ್ಯಾರಂಟಿ ಅನುಷ್ಠಾನದ ವಿಚಾರದಲ್ಲಿ ಕೇಂದ್ರದ ಕಡೆ ಕೈ ತೋರಿಸುತ್ತಾ ರಾಜ್ಯದ ಕಾಂಗ್ರೆಸ್ ಸರ್ಕಾರ ಸುಖಾ ಸುಮ್ಮನೆ ಗೊಂದಲ ಸೃಷ್ಟಿಸುತ್ತಿದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರಿಗೆ ಪಡಿತರ ವ್ಯವಸ್ಥೆ ಮೂಲಕ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ 5 ಕೆ.ಜಿ ಅಕ್ಕಿ ಉಚಿತವಾಗಿ ಕೊಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಹೆಚ್ಚುವರಿಯಾಗಿ ಕೊಡುವುದಾಗಿ ಹೇಳಿದ್ದ 10 ಕೆ.ಜಿ ಅಕ್ಕಿಯನ್ನು ಕೊಡಲು ಕೇಂದ್ರ ಸರ್ಕಾರ ಒಪ್ಪಿರಲಿಲ್ಲ. ಆ ಅಕ್ಕಿ ಹೊಂದಿಸಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಅವರು (ರಾಜ್ಯ ಸರ್ಕಾರ) ಎಲ್ಲಿಯಾದ್ರೂ ಖರೀದಿ ಮಾಡಿಕೊಡಲಿ ಎಂದರು.
ಕಾಂಗ್ರೆಸ್ ನಾಯಕರು 10 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ಚುನಾವಣೆಗೆ ಮುನ್ನ ಭರವಸೆ ಕೊಟ್ಟಿದ್ದರು. ಅದರಂತೆ ಅಷ್ಟೂ ಅಕ್ಕಿ ವಿತರಣೆ ಮಾಡಬೇಕು. ಒಂದು ಗ್ರಾಂ ಕಡಿಮೆಯಾದರೂ ರಾಜ್ಯದ ಜನರು ಒಪ್ಪಲ್ಲ. ಅವರು ಕೊಟ್ಟ ಭರವಸೆ ಈಡೇರಿಸಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದರು.
ಅಕ್ಕಿ ವಿತರಣೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ಅನಗತ್ಯವಾಗಿ ಗೂಬೆ ಕೂರಿಸಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಲಹೆ ನೀಡಿದ ಅವರು. ಯಾವುದೇ ಸಂದರ್ಭದಲ್ಲೂ ನರೇಂದ್ರ ಮೋದಿ ಅವರು ಹೆಚ್ಚುವರಿ ಅಕ್ಕಿ ಕೊಡುತ್ತೇವೆ ಎಂದು ಹೇಳಿಲ್ಲ. ಆದರೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಈ ವಿಚಾರದಲ್ಲಿ ವಿನಾಕಾರಣ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಟೀಕಿಸಿದರು.