ಶಿವಮೊಗ್ಗ .
ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತ ಮಹೋತ್ಸವದ ಅಂಗವಾಗಿ ಇಂದು ಎನ್ಇಎಸ್ ಸಮೂಹದ ಸುಮಾರು ೩೫ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಇಂದು ನಗರದ ಪ್ರಮುಖ ರಸ್ತೆಗಳಲ್ಲಿ ಅಮೃತ ನಡಿಗೆ ಮೂಲಕ ಎನ್ಇಎಸ್ ಆವರಣ ದಲ್ಲಿ ಹಬ್ಬದ ಅನಾವರಣಗೊಳಿಸಿದರು.
ನಗರದ ವಿವಿಧ ಭಾಗಗಳಿಂದ ಸುಮಾರು ೬ ತಂಡಗಳಲ್ಲಿ ಬಂದ ವಿದ್ಯಾರ್ಥಿಗಳು ಅಮೃತ ನಡಿಗೆಯ ಮೂಲಕ ಗಮನ ಸೆಳೆದರು. ಈ ಅಮೃತ ನಡಿಗೆಯಲ್ಲಿ ೧೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಪ್ರೌಢ ಮತ್ತು ಪದವೀ ಶಾಲೆಗಳ ಮಕ್ಕಳು ಅತ್ಯಂತ ಶಿಸ್ತಿನಿಂದ ಎನ್ಇಎಸ್ ಸಂಸ್ಥೆಯ ಪರವಾಗಿ ಘೋಷಣೆಗಳನ್ನು ಕೂಗಿ ನಮ್ಮ ಶಾಲೆ, ನಮ್ಮ ಸಂಸ್ಥೆ, ನಮ್ಮ ಹೆಮ್ಮೆ ಎಂದು ಬಣ್ಣಿಸಿದರು. ಸುಮಾರು ಮೂರು ಕಿ.ಮೀ. ಉದ್ದಕ್ಕೂ ವಿದ್ಯಾರ್ಥಿಗಳ ಸಾಲಿತ್ತು. ಅತ್ಯಂತ ಆಕರ್ಷಕವಾದ ಮೆರವಣಿಗೆ ಇದಾಗಿತ್ತು. ಎನ್ಇಎಸ್ ಮೈದಾನ ದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ವಿದ್ಯಾರ್ಥಿಗಳು ಹೀಲಿಯಂ ಬೆಲೂನ್ ಆಕಾಶಕ್ಕೆ ಹಾರಿಸಿ ಸಂಭ್ರಮಿಸಿದರು. ಅಕ್ಷರಶಃ ಹಬ್ಬದ ವಾತಾವರಣ ಅಲ್ಲಿತ್ತು. ವಿದ್ಯಾರ್ಥಿ ಗಳು ನೃತ್ಯ ಪ್ರದರ್ಶನ ನಡೆಸಿದರು.
ಎನ್ಇಎಸ್ ಸಂಸ್ಥೆಯ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಲೋಗೋ ಬಿಡುಗಡೆ ಮಾಡಿ ಮಾತನಾಡಿ, ಇತಿಹಾಸದಲ್ಲಿ ನೆನಪಿಡುವ ದಿನ ಇದಾಗಿದೆ. ರಾಷ್ಟ್ರೀಯ ಶಿಕ್ಷಣ ಸಮಿತಿ ಗ್ರಾಮೀಣ ಮಟ್ಟಕ್ಕೂ ಶಿಕ್ಷಣವನ್ನು ವಿಸ್ತರಿಸ ಬೇಕು ಎಂಬ ಹಿನ್ನೆಲೆಯಲ್ಲಿ ಕಳೆದ ೭೫ ವರ್ಷಗಳಿಂದ ಶಿಕ್ಷಣ ಸಂಸ್ಥೆ ಯನ್ನು ನಡೆಸುತ್ತಾ ಬಂದಿದೆ. ಲಕ್ಷಾಂತರ ಸಂಖ್ಯೆಯಲ್ಲಿ ವಿದ್ಯಾರ್ಥಿ ಗಳು ಇಲ್ಲಿ ಕಲಿತು ಉನ್ನತ ಸ್ಥಾನಗಳಲ್ಲಿದ್ದಾರೆ. ಅಮೃತ ಮಹೋತ್ಸವ ಎನ್ಇಎಸ್ ಹಬ್ಬ ಎಂದು ಬಣ್ಣಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತ ಮಹೋತ್ಸವ ಜೂ.೨೦ ಮತ್ತು ೨೧ರಂದು ಎನ್ಇಎಸ್ ಮೈದಾನದಲ್ಲಿ ನಡೆಯಲಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳು ಸೇರಿದಂತೆ ಹಲವು ಗಣ್ಯರ ಈ ಕಾರ್ಯಕ್ರಮದಲ್ಲಿ ಭಾಗವಹಿ ಸಲಿದ್ದಾರೆ.
ಎರಡೂ ದಿನಗಳ ಕಾಲವೂ ಮಕ್ಕಳಿಗೆ ಊಟ, ತಿಂಡಿಯ ವ್ಯವಸ್ಥೆ ಮಾಡಲಾಗಿದೆ. ಸುಮಾರು ೩೫ ಸಂಸ್ಥೆಗಳ ೧೮ ಸಾವಿರ ಮಕ್ಕಳು ಈ ಅಮೃತ ಮಹೋತ್ಸವ ಸಮಾ ರಂಭದಲ್ಲಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿಯ ನಿರ್ದೇಶಕರಾದ ಎಚ್.ಸಿ.ಶಿವಕುಮಾರ, ಎಸ್.ಮಾಧುರಾವ್, ಜಿ.ಎನ್.ಸುಧೀರ್, ಕಾಲೇಜಿನ ಪ್ರಾಂಶುಪಾಲರಾದ ಡಾ.ಎಚ್.ಎಸ್.ನಾಗಭೂಷಣ, ಡಾ.ಆರ್.ಎಂ.ಜಗದೀಶ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ.ಬಾಲಕೃಷ್ಣ ಹೆಗಡೆ, ಕಸ್ತೂರಬಾ ಕಾಲೇಜಿನ ರಂಗಪ್ಪ, ಎನ್.ಇ.ಎಸ್.ಬಿ.ಎಡ್.ಕಾಲೇಜು ಪ್ರಾಂಶುಪಾಲ ಡಾ.ಚಿದಾನಂದ, ಎಂ.ಕಾಂ.ಕಾಲೇಜಿನ ಪ್ರಾಂಶುಪಾಲರಾದ ಕವಿತಾ ಡಿಕಾಸ್ಟ, ಪ್ರೊ.ಜೆ.ಎಲ್.ಪದ್ಮನಾಭ, ವಿದ್ಯಾಶ್ರೀ ಬಿ.ಕೆ. ಮೊದಲಾದವರಿದ್ದರು.