ಶಿವಮೊಗ್ಗ, ಮೇ.31:

ವೈನ್ ಉದ್ಯಮದಲ್ಲಿ ಮಹಿಳಾ ಉದ್ಯಮಿಯಾಗಿ ಇಡೀ ರಾಜ್ಯದಲ್ಲಿ ನಾನೇ ಪ್ರಥಮವಾಗಿದ್ದು, ಈ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಖ್ಯಾತ ಉದ್ಯಮಿ ಸುಷ್ಮಾ ಸಂಜಯ್ ಹೇಳಿದರು.

ಶಿವಮೊಗ್ಗ ಭಾವಸಾರ ವಿಜನ್ ಇಂಡಿಯಾ ಸಂಸ್ಥೆ ವತಿಯಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ವೈನ್ ಉದ್ಯಮ ನಡೆಸುವುದು ಸುಲಭದ ಮಾತಲ್ಲ. ಅದರಲ್ಲೂ ಗ್ರಾಮೀಣ ಭಾಗದಲ್ಲಿದ್ದುಕೊಂಡು, ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಹ ಉದ್ಯಮ ನಡೆಸುವುದು ತೀರ ಕಷ್ಟಕರ. ಆದರೂ ಛಲ ಬಿಡದೇ ನಾನು ಈ ಸಂಸ್ಥೆ ನಿರ್ವಹಿಸುತ್ತಿದ್ದೆನೆ. ಇದಕ್ಕೆ ಅಬಕಾರಿ ಇಲಾಖಾಧಿಕಾರಿಗಳ ಸಹಕಾರ ಮರೆಯುವ ಹಾಗೆ ಇಲ್ಲ ಎಂದು ಅವರು ಹೇಳಿದರು.

ಪ್ರಸ್ತುತ ಹಲವಾರು ಯುವ ಉದ್ಯೋಗಕಾಂಕ್ಷಿಗಳು, ತಮಗೆ ಕೆಲಸ ಸಿಗಬೇಕೆಂಬ ನಿಟ್ಟಿನಲ್ಲಿ ಹಲವಾರು ವರ್ಷಗಳ ಕಾಲ ಕಾಲಹರಣ ಮಾಡಿ ನಿರಾಸೆ ಹೊಂದುತ್ತಾರೆ. ಅದರ ಬದಲು, ತಮ್ಮದೇ ಸ್ವಂತ ಉದ್ಯಮವನ್ನು, ತಮಗೆ ಇಷ್ಟವಾದ ಕ್ಷೇತ್ರದಲ್ಲಿ ಆಯ್ಕೆ ಮಾಡಿಕೊಂಡು ನಡೆಸಿಕೊಂಡು ಹೋಗಬೇಕು. ಆಗ ಮಾತ್ರ ಸಾಧಿಸಲು ಸಾಧ್ಯವಾಗುತ್ತದೆ ಎಂದು ಉದ್ಯೋಗಕಾಂಕ್ಷಿಗಳಿಗೆ ಕಿವಿ ಮಾತು ಹೇಳಿದರು.

ಇನ್ನು ಕಾರ್ಯಕ್ರಮದಲ್ಲಿ ವೈನ್ ಉದ್ಯಮದ ಕುರಿತಂತೆ ಸವಿಸ್ತಾರವಾಗಿ ಮಾತನಾಡಿದ ಅವರು, ಬೇರೆ ಉತ್ಪನ್ನಗಳಿಗಿಂತ ತಮ್ಮ ಸಂಸ್ಥೆಯ ಉತ್ಪನ್ನ ಎಷ್ಟು ಭಿನ್ನ ಎಂದು ಮನವರಿಕೆ ಮಾಡಿಕೊಟ್ಟರು. ಅಲ್ಲದೇ, ಅನೇಕ ಉದ್ಯೋಗಕಾಂಕ್ಷಿಗಳಿಗೆ ತಮ್ಮ ಸಂಸ್ಥೆಯಲ್ಲಿ ಕೆಲಸ ನೀಡಿದ ತೃಪ್ತಿ ತಮಗಿದ್ದು, ಯುವ ಪೀಳಿಗೆ ಉದ್ಯೋಗ ಹುಡುಕುವ ಬದಲು ಉದ್ಯೋಗ ಸೃಷ್ಟಿ ಮಾಡಿಕೊಳ್ಳಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿವಮೊಗ್ಗದ ಪರಿಸರ ಪ್ರೇಮಿ, ಕೇವಲ ಪಕ್ಷಿಗಳಿಗಾಗಿಯೇ ತಮ್ಮ 1 ಎಕರೆ ಪ್ರದೇಶದಲ್ಲಿ ಈಶ್ವರವನ ನಿರ್ಮಾಣ ಮಾಡಿರುವ ನವ್ಯಶ್ರೀ ನಾಗೇಶ್ ಅವರಿಗೆ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆ ಕಾರ್ಯದರ್ಶಿ ಸಚಿನ್ ಬೇದ್ರೆ, ನಿರ್ದೇಶಕರಾದ ಸ್ವಪ್ನಾ ಹರೀಶ್, ಮಮತಾ ಕಮಲಾಕರ್, ಸ್ವಪ್ನ ಪ್ರಭಾಕರ್, ವಾಣಿ ತೇಲ್ಕರ್, ವಿನಯ್ ಕುಂಟೆ, ಕೀರ್ತಿ ಕಿರಣ್, ದಿನೇಶ್ ಕುಂಠೆ, ಕಮಲಾಕರ್, ಕಿರಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷ ಪ್ರಭಾಕರ್ ವಂಡ್ಕರ್ ವಹಿಸಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!