ಶಿವಮೊಗ್ಗ : ನಗರದ ಪ್ರತಿಷ್ಟಿತ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕುಲಸಚಿವರಾಗಿ ಪ್ರೊ.ಎನ್.ಕೆ.ಹರಿಯಪ್ಪ ಅವರನ್ನು ಹಾಗೂ ಶೈಕ್ಷಣಿಕ ಆಡಳಿತಾಧಿಕಾರಿಯಾಗಿ ಮಂಡಗದ್ದೆಯ ಅಡ್ಡಮನೆ ರಾಮಚಂದ್ರ ಅವರನ್ನು ಆಡಳಿತ ಮಂಡಳಿ ನೇಮಕೊಳಿಸಿದೆ.
ಬುಧವಾರ ಎನ್ಇಎಸ್ ಕಛೇರಿಯಲ್ಲಿ ಏರ್ಪಡಿಸಿದ್ದ ಪದಗ್ರಹಣ ಸಮಾರಂಭದಲ್ಲಿ ನೂತನ ಕುಲಸಚಿವರು ಹಾಗೂ ಶೈಕ್ಷಣಿಕ ಆಡಳಿತಾಧಿಕಾರಿ ಅಧಿಕಾರ ಸ್ವೀಕರಿಸಿದರು. ಇದೇ ವೇಳೆ ನಿರ್ಗಮಿತ ಕುಲಸಚಿವರಾದ ಪ್ರೊ.ಟಿ.ಎಸ್.ಹೂವಯ್ಯಗೌಡ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಪ್ರೊ.ಟಿ.ಎಸ್.ಹೂವಯ್ಯಗೌಡ ಮಾತನಾಡಿ, ಎನ್ಇಎಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ದಿನಗಳನ್ನೂ ಎಂದಿಗೂ ಮರೆಯಲಾಗದು. ಬದುಕಿನ ಪ್ರತಿ ಹೆಜ್ಜೆಯ ಉನ್ನತಿಯಲ್ಲಿ ನನ್ನ ಮಿತ್ರರಿಗಿಂತ ಶತ್ರುಗಳ ಪಾತ್ರವೇ ಹೆಚ್ಚು. ಅಂತಹ ವ್ಯಕ್ತಿತ್ವಗಳು ನಮ್ಮಲ್ಲಿ ಸಾಧಿಸುವ ಕಿಚ್ಚನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಎನ್ಇಎಸ್ ಅಧ್ಯಕ್ಷರಾದ ಜಿ.ಎಸ್.ನಾರಾಯರಾವ್ ಮಾತನಾಡಿ, ಬೀಳ್ಕೊಡುಗೆ ಪ್ರಕ್ರಿಯೆ ಸದಾ ಮನಸ್ಸಿಗೆ ಬೇಸರ ಉಂಟುಮಾಡುತ್ತದೆ. ಮೇರು ವ್ಯಕ್ತಿತ್ವದ ಹೂವಯ್ಯಗೌಡರು, ಮೆಲು ಧ್ವನಿಯಲ್ಲಿ ತಿಳಿ ಹೇಳುವ ಮೂಲಕ ಮೃದು ವ್ಯಕ್ತಿತ್ವದೊಂದಿಗೆ ನೌಕರ ಸ್ನೇಹಿಯಾಗಿ ಚಿಂತನೆ ನಡೆಸುತ್ತಿದ್ದರು ಎಂದು ಹೇಳಿದರು.
ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಮಾತನಾಡಿ, ಕ್ರಿಯಾಶೀಲತೆ ಎಂಬುದು ಗಟ್ಟಿಗೊಳ್ಳುತ್ತಾ ಹೋಗುವುದು ನಮ್ಮಲ್ಲಿನ ಅಂತಶಕ್ತಿಯಿಂದಲೇ ವಿನಃ ಸಿಕ್ಕಿರುವ ಸೌಲಭ್ಯ ಸೌಲತ್ತಿನಿಂದಲ್ಲ. ಅಂತಹ ಅಂತಶಕ್ತಿ ಹೊಂದಿದ್ದ ವ್ಯಕ್ತಿ ಹೂವಯ್ಯಗೌಡರು. ಪ್ರಾಮಾಣಿಕತೆ ಹೆದರಿಕೆಯಿಂದಲೊ, ಪರಿಸರದ ಅನಿವಾರ್ಯತೆಯಿಂದ ಬರಬಹುದು. ಅದರೇ ಧೃಡತೆ ಎಂಬುದು ವ್ಯಕ್ತಿತ್ವದಿಂದಲೇ ಬರಬೇಕಾದ ವಿಚಾರ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷರಾದ ಸಿ.ಆರ್.ನಾಗರಾಜ, ಸಹ ಕಾರ್ಯದರ್ಶಿಗಳಾದ ಡಾ.ಪಿ.ನಾರಾಯಣ್, ಖಜಾಂಚಿಗಳಾದ ಡಿ.ಜಿ.ರಮೇಶ್, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಎನ್.ಟಿ.ನಾರಾಯಣರಾವ್, ಹೆಚ್.ಸಿ.ಶಿವಕುಮಾರ್, ಸೀತಾಲಕ್ಷ್ಮೀ, ಅನಂತದತ್ತಾ, ಸುಧೀರ್, ಮಧುರಾವ್, ಅಜೀವ ಸದಸ್ಯರಾದ ಎಚ್.ಎಂ.ಮಲ್ಲಪ್ಪ, ಕಿಶೋರ್ ಶೀರನಾಳಿ, ವಾಗ್ದೇವಿ ಸೇರಿದಂತೆ ವಿವಿಧ ವಿದ್ಯಾಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎನ್ಇಎಸ್ ಅಮೃತಮಹೋತ್ಸವ ಸಮಾರೋಪ ಸಮಾರಂಭದ ಬಿತ್ತಿ ಪತ್ರ ಬಿಡುಗಡೆಗೊಳಿಸಲಾಯಿತು.