ನಾರಿ ಶಕ್ತಿ ಪ್ರಜ್ವಲಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಹೇಳಿದರು.
ಅವರು ಇಂದು ಮಹಾನಗರ ಪಾಲಿಕೆ ವತಿಯಿಂದ ಜಿಲ್ಲಾ ವಾಣಿಜ್ಯ ಮತ್ತುಕೈಗಾರಿಕಾ ಸಂಘದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲಿಯೂ ತನ್ನ ಇರುವಿಕೆಯನ್ನು ತೋರಿಸುತ್ತಿದ್ದಾಳೆ. ಜಗತ್ತಿನ ಹಲವು ದೇಶಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಮಹಿಳಾ ಶಕ್ತಿ ಮತ್ತು ಸಂಘಟನೆ ಹೆಚ್ಚಾಗುತ್ತಿದೆ. ಸ್ಥಳೀಯ ಸಂಸ್ಥೆಗಳಲ್ಲೂ ಕೂಡ ತನ್ನ ಪ್ರಭಾವ ಬೀರುತ್ತಿದ್ದಾಳೆ ಎಂದರು.
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಸದಸ್ಯರ ಬದಲಾಗಿ ಅವರ ಗಂಡಂದಿರು ಪ್ರವರ್ಧಮಾನಕ್ಕೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ.

ನಾನು ಅನೇಕ ಕಡೆ ಗಮನಿಸಿದ್ದೇನೆ. ಸಾಮಾನ್ಯ ಸಭೆಗಳಲ್ಲಿಯೂ ಮಹಿಳೆಯರ ಗಂಡಂದಿರು ಬರುತ್ತಾರೆ. ಇದು ತಪ್ಪಬೇಕು. ಆದರೆ ಶಿವಮೊಗ್ಗ ಮಹಾನಗರ ಪಾಲಿಕೆ ಇದಕ್ಕೆ ಅಪವಾದವಾಗಿದೆ ಎಂದರು.



ಮೇಯರ್ ಶಿವಕುಮಾರ್ ಮಾತನಾಡಿ, ಮಹಿಳೆ ಇಂದು ಸಾಧನೆಯ ಸಾಕಾರ ಮೂರ್ತಿಯಾಗಿದ್ದಾಳೆ. ಆ ಶಕ್ತಿ ಮತ್ತಷ್ಟು ಹೆಚ್ಚಬೇಕು. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಅತ್ಯಂತ ಗೌರವವಿದೆ. ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನಿಲ್ಲಬೇಕು. ಎಲ್ಲಾ ಕ್ಷೇತ್ರಗಳಲ್ಲಿಯೂ ಅವರು ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಸೂಲಗಿತ್ತಿ ಗಂಗಮ್ಮ, ಸಾಮಾಜಿಕ ಕಾರ್ಯಕರ್ತೆ ಜಯಲಕ್ಷ್ಮಿ, ಮಂಗಳಮುಳಿ ಅರ್ಚನಾ ಅವರಿಗೆ ಕಿತ್ತೂರು ಚೆನ್ನಮ್ಮಾಜಿ ಪ್ರಶಸ್ತಿ ನೀಡಿ ಗೌರವಿಸಲಾಯಿತು

.
ಈ ಸಂದರ್ಭದಲ್ಲಿ ಉಪಮೇಯರ್ ಲಕ್ಷ್ಮೀ ಶಂಕರ ನಾಯ್ಕ್, ಪ್ರಮುಖರಾದ ಸುವರ್ಣ ಶಂಕರ್, ಆರತಿ ಆ.ಮ. ಪ್ರಕಾಶ್, ರೇಖಾ ರಂಗನಾಥ್, ಕಲ್ಪನಾ, ಅಧಿಕಾರಿ ಅನುಪಮಾ ಸೇರಿದಂತೆ ಹಲವರಿದ್ದರು