ಜಿಲ್ಲೆಯಲ್ಲಿ ಎಲೆಕ್ಷನ್ ಚೆಕ್ಪೋಸ್ಟ್
ಲಕ್ಷಾಂತರ ಮೌಲ್ಯದ ಬಟ್ಟೆ, ಸೀರೆ, ಇಡ್ಲಿ ಕುಕ್ಕರ್, ನಾನ್ ಸ್ಟಿಕ್ ದೋಸಾ ತವಾ, ಟನ್ಗಟ್ಟಲೆ ಆಹಾರ ಸಾಮಾಗ್ರಿಗಳ ವಶ
ಶಿವಮೊಗ್ಗ, ಮಾ.೨೪:
ಮುಂಬರುವ ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲೆಯಾದ್ಯಂತ ನಾಖಾಬಂಧಿ (ಚೆಕ್ ಪೋಸ್ಟ್ಗಳನ್ನು) ತೆರೆದು ವಾಹನಗಳ ತಪಾಸಣೆಯನ್ನು ನಡೆಸುತ್ತಿದ್ದು, ಸೂಕ್ತ ದಾಖಲೆಗಳಿಲ್ಲದೇ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ಮೌಲ್ಯದ ಬಟ್ಟೆ, ಸೀರೆ, ಇಡ್ಲಿ ಕುಕ್ಕರ್, ನಾನ್ ಸ್ಟಿಕ್ ದೋಸಾ ತವಾ, ಟನ್ಗಟ್ಟಲೆ ಆಹಾರ ಸಾಮಾಗ್ರಿಗಳನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ.
ಆಗುಂಬೆ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಲಾರಿಯಲ್ಲಿ ಸಾಗಿಸುತ್ತಿದ್ದ ಅಂದಾಜು ಮೌಲ್ಯ ೨೯,೭೦,೦೦೦ ರೂಗಳ ಒಟ್ಟು ೧೧೦೦ ಸಂಖ್ಯೆಯ ನಾನ್ ಸ್ಟಿಕ್ ದೋಸಾ ತವಾ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಲಾರಿಯಲ್ಲಿ ಸಾಗಿಸುತ್ತಿದ್ದ ಅಂದಾಜು ಮೌಲ್ಯ ೮,೦೦,೦೦೦ ರೂಗಳ ಒಟ್ಟು ೩೦ ಟನ್ ತೂಕದ ಬೇಳೆ, ರವೆ, ಗೋಧಿ ಮತ್ತು ಇತರೆ ಆಹಾರ ಸಾಮಗ್ರಿಗಳು ತುಂಬಿದ್ದ ೧,೦೦೦ ಬ್ಯಾಗ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಲಾರಿಯಲ್ಲಿ ಸಾಗಿಸುತ್ತಿದ್ದ ಅಂದಾಜು ಮೌಲ್ಯ ೭,೦೦,೦೦೦ ರೂ ಗಳ ಒಟ್ಟು ೧೦ ಟನ್ ೫೦೪ ಕೆಜಿ ತೂಕದ ಅಕ್ಕಿ ತುಂಬಿದ್ದ ೪೦೪ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ.
ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಸಂಗ್ರಹಿಸಿಟ್ಟಿದ್ದ ಅಂದಾಜು ಮೌಲ್ಯ ೧೦,೦೦,೦೦೦ ರೂ ಗಳ ಬಟ್ಟೆ, ಸೀರೆ, ಇಡ್ಲಿ ಕುಕ್ಕರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದರೊಂದಿಗೆ ಶಿವಮೊಗ್ಗ ಜಿಲ್ಲೆಯಾದ್ಯಂತ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ, ಅಂದಾಜು ಮೌಲ್ಯ ೧೭,೫೦೭ ರೂಗಳ ಒಟ್ಟು ೨೫ ಲೀಟರ್ ೬೦೮ ಮಿಲಿ ಅಕ್ರಮ ಮದ್ಯವನ್ನು ಅಮಾನತ್ತು ಪಡಿಸಿಕೊಂಡು ಆರೋಪಿತರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯಡಿಯಲ್ಲಿ ಒಟ್ಟು ೮ ಪ್ರಕರಣಗಳನ್ನು ದಾಖಲಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.