ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ ಭೂಮಿ ನೀಡಿದ ರೈತರಿಗೆ ನಿಲ್ದಾಣ ಉದ್ಘಾಟನೆಯಾಗುವ ಮೊದಲು ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸೋಗಾನೆ ಗ್ರಾಮದ ಸರ್ವೆ ನಂ.೧೨೨ರ ರೈತರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.


ಸರ್ವೆ ನಂ೧೨೨ರಲ್ಲಿ ಸುಮಾರು ೫೦ ವರ್ಷಗಳಿಂದ ನಾವು ಸಾಗುವಳಿ ಮಾಡಿಕೊಂಡು ಬಂದಿದ್ದೆವು. ನಮ್ಮ ಹೆಸರಿನಲ್ಲಿ ಸಾಗುವಲೀ ಚೀಟಿ ಮತ್ತು ಪಾಣಿ ಕೂಡ ಇದೆ. ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಹೆಚ್ಚುವರಿಯಾಗಿ ನಮಗೆ ಸೇರಿದ ೨೪ ಎಕರೆ ಜಮೀನನ್ನು ನೀಡುವಾಗ ಗ್ರಾಮಾಂತರ ಶಾಸಕರು ಹಾಗೂ ಉಪ ವಿಭಾಗಾಧಿಕಾರಿಗಳು ಮಧ್ಯಪ್ರವೇಶ ಮಾಡಿ, ಎಕರೆಗೆ ೪೦ ಲಕ್ಷ ರೂ. ಹಾಗೂ ಒಂದು ನಿವೇಶನ ಕೊಡುವುದಾಗಿ ತೀರ್ಮಾನಿಸಿದ್ದರು ಎಂದು ಪ್ರತಿಭಟನಕಾರರು ತಿಳಿಸಿದರು.


ಸರ್ಕಾರ ಕೂಡ ಇದಕ್ಕೆ ತನ್ನ ಒಪ್ಪಿಗೆ ಸೂಚಿಸಿ ೨೪ ಎಕರೆ ಜಮೀನಿಗೆ ೧೦.೫೪ ಕೋಟಿ ರೂ. ನಿಗದಿ ಮಾಡಿ, ಜಿಲ್ಲಾಧಿಕಾರಿಗಳ ಖಾತೆಗೆ ಜಮಾ ಕೂಡ ಮಾಡಿದೆ. ಆದರೆ ಇಲ್ಲಿಯವರೆಗೆ ಭೂಮಿ ಕಳೆದುಕೊಂಡ ನಮಗೆ ಯಾವುದೇ ರೀತಿಯ ಪರಿಹಾರ ಸಿಕ್ಕಿಲ್ಲ. ಪರಿಹಾರ ಸಿಗದ ಹೊರತು ನಾವು ಹೇಗೆ ವಿಮಾನ ನಿಲ್ದಾಣ ಉದ್ಘಾಟನೆಗೆ ಒಪ್ಪುತ್ತೇವೆ, ಆದ್ದರಿಂದ ಯಾವ ಕಾರಣವನ್ನೂ ಹೇಳದೆ ವಿಮಾನ ನಿಲ್ದಾಣದ ಉದ್ಘಾಟನೆಗೆ ಮೊದಲೇ ಉಪವಿಭಾಗಾಧಿಕಾರಿಗಳಿಗೆ ಪರಿಹಾರ ನೀಡುವಂತೆ ಆದೇಶ ನೀಡಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ.


ಈ ಸಂದರ್ಭದಲ್ಲಿ ರೈತಮುಖಂಡರುಗಳಾದ ಬಿ.ಟಿ. ರವಿಕುಮಾರ್, ಬಿ.ಆರ್. ನಾಗರಾಜ್, ಬಾಲಕೃಷ್ಣ, ರಾಜಪ್ಪ, ಶಿವಮ್ಮ, ಶಾಂತಮ್ಮ, ಚಂದ್ರಪ್ಪ ಹಾಗೂ ಮಲೆನಾಡು ರೈತ ಹೋರಾಟ ಸಮಿತಿಯ ಮುಖ್ಯಸ್ಥ ತೀ.ನ. ಶ್ರೀನಿವಾಸ್ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!