ಶಿವಮೊಗ್ಗ: ಹೊಡಿ, ಬಡಿ, ಕಡಿ, ಬಿಜೆಪಿಯ ಸಂಸ್ಕೃತಿಯಾಗಿದೆ. ಪ್ರಚೋದನಾಕಾರಿ ಹೇಳಿಕೆ ನೀಡಿದ ಸಚಿವ ಅಶ್ವತ್ಥನಾರಾಯಣ್ ವಜಾಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಆಗ್ರಹಿದ್ದು, ಇಂದು ನಗರದ ಶಿವಪ್ಪನಾಯಕ ವೃತ್ತದಲ್ಲಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು.
ಮಾಜಿ ಮುಖ್ಯಮಂತ್ರಿಗಳು, ಹಾಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ವಿರುದ್ಧ ಪ್ರಚೋದನಕಾರಿಯಾಗಿ ನಾಲಿಗೆ ಹರಿಬಿಟ್ಟ ಸಚಿವ ಡಾ.ಅಶ್ವತ್ಥನಾರಾಯಣ್ ಅವರ ಹೊಡಿ ಬಡಿ ಸಂಸ್ಕೃತಿಯ ಹೇಳಿಕೆಯನ್ನು ಪ್ರತಿಭಟನಾನಿರತರು ತೀವ್ರವಾಗಿ ವಿರೋಧಿಸಿದರು.
ದುರಹಂಕಾರಿ ಸಚಿವ ಡಾ.ಅಶ್ವತ್ಥನಾರಾಯಣ್ ಕೊಟ್ಟ ಪ್ರಚೋದನಾಕಾರಿ ಹೇಳಿಕೆಯಿಂದ ಸಿದ್ದರಾಮಯ್ಯ ಅವರಿಗಾಗಲೀ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗಾಗಲಿ ಆತಂಕ, ಆಶ್ಚರ್ಯವಾಗಿಲ್ಲ, ಯಾಕೆಂದರೆ ರಾಷ್ಟ್ರಪಿತ ಗಾಂಧೀಜಿಯನ್ನು ಕೊಂದವರನ್ನೇ ಆರಾಧಿಸುತ್ತಿರುವ ಬಿಜೆಪಿ ಪಕ್ಷದ ನಾಯಕರಿಂದ ಕೊಲೆಗಡುಕತನವಲ್ಲದೇ ಪ್ರೀತಿ, ಕರುಣೆ, ಸ್ನೇಹವನ್ನು ನಿರೀಕ್ಷಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ರಾಜ್ಯದ ಒಬ್ಬ ಸಚಿವ ಈ ರೀತಿ ಬಹಿರಂಗವಾಗಿ ಪ್ರಚೋದನಾಕಾರಿ ಕರೆ ನೀಡಿದ ನಂತರವೂ ಅವರ ವಿರುದ್ಧ ಪೊಲೀಸರು ಕ್ರಮಕೈಗೊಂಡಿಲ್ಲ ಎಂದಾದರೆ ಈ ರಾಜ್ಯವನ್ನು ಆಳುವವರು ಜೀವಂತವಾಗಿಲ್ಲ, ಸರ್ಕಾರ ಸತ್ತುಹೋಗಿದೆ ಎಂದೇ ಲೆಕ್ಕ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೌನ ಪ್ರತಿಕ್ರಿಯೆ ನೋಡಿದರೆ ಬಿಜೆಪಿಯ ನಿಜ ಸಂಸ್ಕೃತಿ ಏನೆಂಬುದು ಈ ರಾಜ್ಯದ ಜನತೆಗೆ ಅರ್ಥವಾಗುತ್ತಿದೆ ಎಂದು ದೂರಿದರು.
ಕೂಡಲೇ ಅಶ್ವತ್ಥನಾರಾಯಣ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿ ಇವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದು, ಇಲ್ಲವಾದಲ್ಲಿ ರಾಜ್ಯದಾದ್ಯಂತ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗುವುದು ಎಂದರು.
ಪ್ರತಿಭಟನೆ ನೇತೃತ್ವವನ್ನು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್. ಪಿ. ಗಿರೀಶ್ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯರಾದ ಆರ್. ಪ್ರಸನ್ನ ಕುಮಾರ್, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್ ರಮೇಶ್ , ಕೆ. ರಂಗನಾಥ್, ಕಲೀಮ್ ಪಾಷಾ, ಬಿ.ಲೋಕೇಶ್, ಎಸ್ ಕುಮಾರೇಶ್, ಆರ್ ಕಿರಣ್, ಮಧು ಉಪ್ಪರಾಕೇರಿ, ತಂಗರಾಜ್, ಎಂ. ರಾಕೇಶ್, ಸಂದೀಪ್ ಸುಂದರ್ ರಾಜ್, ಇರ್ಫಾನ್, ಕೆ.ಎಲ್. ಪವನ್, ನದೀಮ್ ಮದರಿಪಾಳ್ಯ, ಆದಿಲ್ ಭಾಷಾ, ಮಸ್ತಾನ್ , ಹಯಾದ್, ಅಬ್ದುಲ್ ಆಹಾದ್ ಸೋಮಿನಕೊಪ್ಪ, ಮಧು ಸೀಗೆಹಟ್ಟಿ, ಅಜಿತ್, ಪೂರ್ವಿಕ್, ವತನ್ ಲಾಲ್ ಮೊದಲಾದವರಿದ್ದರು.