ನನಗೆ ಟಿಕೇಟ್ ಸಿಗುವುದಿಲ್ಲ ಎಂದು ಭವಿಷ್ಯ ನುಡಿಯಲು ಹರತಾಳು ಹಾಲಪ್ಪ ಕಾಂಗ್ರೇಸ್ ಹೈಕಮಾಂಡಾ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಪ್ರಶ್ನಿಸಿದ್ದಾರೆ.
ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್, ಮಾವ ಕಾಗೋಡು ತಿಮ್ಮಪ್ಪ, ಅವರ ಮಗಳು ಡಾ. ರಾಜನಂದಿನಿ ಅಥವಾ ನನಗೆ ಟಿಕೇಟ್ ಕೊಟ್ಟರೂ ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆ. ಈ ಸಾರಿ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದು ಹೇಳಿದರು.

ಶಾಸಕ ಹಾಲಪ್ಪ ಹರತಾಳು ಟೀಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಗಣಪತಿ ಕೆರೆ ಮಲೀನವಾಗಿರುವ ಬಗ್ಗೆ ಪ್ರತಿಭಟನೆ ಮಾಡಿದರೆ ಎಲ್ಲಿ ತಮ್ಮ ಭ್ರಷ್ಟಾಚಾರ ಬಯಲಿಗೆ ಬರುತ್ತದೆಯೋ ಎಂದು ಶಾಸಕರಾದಿಯಾಗಿ, ಬಿಜೆಪಿ ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದು ಹಾಸ್ಯಾಸ್ಪದವಾಗಿದೆ. ಕೆರೆ ಶುದ್ದವಾಗಿದೆ ಎಂದು ಹೇಳುವ ಶಾಸಕರು ಈಗಿನ ಕೆರೆಯಿಂದ ಒಂದು ಲೋಟ ನೀರು ಕುಡಿದು ಪರಿಶುದ್ದವಾಗಿದೆ ಎನ್ನುವುದನ್ನು ಸಾಬೀತುಪಡಿಸಲಿ. ವಿಶಾಲವಾಗಿದ್ದ ಗಣಪತಿ ಕೆರೆಯನ್ನು ಈಜುಕೊಳದಂತೆ ಸಣ್ಣದಾಗಿಸಿದ ಹೆಗ್ಗಳಿಕೆ ಶಾಸಕರಿಗೆ ಸಲ್ಲುತ್ತದೆ. ಸಾರ್ವಜನಿಕರ ದಾರಿ ತಪ್ಪಿಸಲು ಕೆರೆ ವಿಸ್ತೀರ್ಣ ಜಾಸ್ತಿಯಾಗಿದೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಶಿವಮೊಗ್ಗ/ ಬಿಡಾಡಿ ಕುದುರೆಗಳ ನಿಯಂತ್ರಣಕ್ಕೆ ಕಠಿಣ ಕ್ರಮ: ಪಾಲಿಕೆ ನಿರ್ಧಾರ ಕುದುರೆ ಕಿರಿಕ್ ಇದ್ರೆ ಇಲ್ಲಿ ಹೇಳಿ https://tungataranga.com/?p=17844 ಲಿಂಕ್ ಬಳಸಿ ಸುದ್ದಿ ನೋಡಿ

ಗಣಪತಿ ಕೆರೆ ಪುನಶ್ಚೇತನಕ್ಕೆ ಯಾವ ಇಲಾಖೆಯಿಂದ ಎಷ್ಟು ಅನುದಾನ ಬಂದಿದೆ. ಈವರೆಗೆ ಎಷ್ಟು ಹಣ ಖರ್ಚು ಮಾಡಿದ್ದೀರಿ. ಗುತ್ತಿಗೆದಾರ ಯಾರು, ಹೂಳೆತ್ತದೆ ಕೆರೆ ಅಭಿವೃದ್ದಿ ಮಾಡಲು ಮುಂದಾಗಿರುವುದು ಯಾಕೆ, ಕೆರೆ ಒತ್ತುವರಿದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದು ನಿಜವೇ, ನಗರದ ಜನರಿಗೆ ಕುಡಿಯಲು ತರುತ್ತಿರುವ ಶರಾವತಿ ಹಿನ್ನೀರನ್ನು ಗಣಪತಿ ಕೆರೆಗೆ ಬಿಟ್ಟಿರುವುದು ಏಕೆ, ಕೆರೆ ಜಾಗದಲ್ಲಿ ವಾಕಿಂಗ್ ಪಾಥ್ ನಿರ್ಮಿಸಲು ಇಲಾಖೆ ಅನುಮತಿ ಇದೆಯಾ, ಕೆರೆಹಬ್ಬಕ್ಕೆ ಯಾವ ಇಲಾಖೆ ಅನುದಾನ ನೀಡುತ್ತಿದೆ, ಇಂದಿರಾಗಾಂಧಿ ಕಾಲೇಜಿನ ಹಣವನ್ನು

ಕೆರೆಹಬ್ಬಕ್ಕೆ ಬಳಕೆ ಮಾಡುತ್ತಿರುವುದು ನ್ಯಾಯಸಮ್ಮತವೇ, ಕೆರೆಪಕ್ಕದ ಧ್ವಜಸ್ತಂಭ ನಿರ್ಮಾಣಕ್ಕೆ ಖರ್ಚಾದ ಹಣ ಎಷ್ಟು ಎಂದು ಶಾಸಕರನ್ನು ಪ್ರಶ್ನಿಸಿರುವ ಬೇಳೂರು, ನನ್ನ ಅವಧಿಯಲ್ಲಿ ಆದ ಅಭಿವೃದ್ದಿಗೂ, ಈಗಿನ ಅಭಿವೃದ್ದಿಗೂ ಸಾರ್ವಜನಿಕ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.
ಶಾಸಕರಾದ ಮೇಲೆ ಒಂದು ಆಶ್ರಯ ನಿವೇಶನ, ಮನೆ ಕೊಡದೆ ಇರುವುದು, ಬಗರ್ಹುಕುಂ ಸೇರಿದಂತೆ ಯಾವುದೇ ಜಮೀನು ರೈತರಿಗೆ ಮಂಜೂರು ಮಾಡಿ ಕೊಡದಿರುವುದೇ ಹಾಲಪ್ಪ ಸಾಧನೆಯಾಗಿದೆ. ಇವರು ಮಂತ್ರಿಯಾಗಿದ್ದಾಗ ಮಾಡಿದ ಕೆಲಸದಿಂದ ರಾಜ್ಯದ ಮಾನ ಹರಾಜು ಆಗಿದೆ. ಹಾಲಪ್ಪ ರಾಜಕೀಯವಾಗಿ ನನ್ನ ಎದುರು ಬಚ್ಚಾ ಇದ್ದಂತೆ. ಇನ್ನೊಮ್ಮೆ ಅನಗತ್ಯವಾಗಿ ಕಾಂಗ್ರೇಸ್ ಪಕ್ಷದ ವಿರುದ್ದ ಆರೋಪ ಮಾಡಿದರೆ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಗರಸಭಾ ಸದಸ್ಯೆ ಎನ್.ಲಲಿತಮ್ಮ ಮಾತನಾಡಿ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ವಿಪಕ್ಷಗಳ ವಾರ್ಡ್ಗಳಿಗೆ ಅನುದಾನ ಸರಿಯಾಗಿ ವಿತರಣೆ ಮಾಡುತ್ತಿಲ್ಲ. ಬಿಜೆಪಿ ನಗರ ಘಟಕದ ಅಧ್ಯಕ್ಷ ಗಣೇಶ್ ಪ್ರಸಾದ್ ಅವರ ರಬ್ಬರ್ ಸ್ಟಾಂಪ್ನಂತೆ ಅಧ್ಯಕ್ಷರು ಕೆಲಸ ಮಾಡುತ್ತಿದ್ದು, ಅಭಿವೃದ್ದಿ ನಿಂತ ನೀರಾಗಿದೆ ಎಂದು ದೂರಿದರು.
ಗೋಷ್ಟಿಯಲ್ಲಿ ಐ.ಎನ್.ಸುರೇಶಬಾಬು, ಸೋಮಶೇಖರ ಲ್ಯಾವಿಗೆರೆ, ಮಹಾಬಲ ಕೌತಿ, ತಾರಾಮೂರ್ತಿ, ಕೆ.ಹೊಳೆಯಪ್ಪ, ಮಂಡಗಳಲೆ ಗಣಪತಿ, ದಿನೇಶ್ ಡಿ., ಅನ್ವರ್ ಭಾಷಾ, ಮನೋಜ್ ಕುಗ್ವೆ, ನಾರಾಯಣಪ್ಪ, ರವಿಕುಮಾರ್, ಷಣ್ಮುಖ, ಸಚಿನ್, ಗಣಾಧೀಶ್ ಇನ್ನಿತರರು ಹಾಜರಿದ್ದರು.