ಮೊಗ್ಗ : ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಲಭಿಸಿರುವುದು ಕರ್ನಾಟಕಕ್ಕೆ ಗೌರವ ಸಿಕ್ಕಂತಾಗಿದೆ. ಮಂಡ್ಯ ಭಾಗಕ್ಕೂ ಗೌರವ ದೊರೆತಿದೆ. ಮಂಡ್ಯಕ್ಕೆ ಭಾರತ ಸರ್ಕಾರ ದೊಡ್ಡ ಕೊಡುಗೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಹೇಳಿದರು.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮಂಡ್ಯ, ಮೈಸೂರು ಭಾಗದಲ್ಲಿ ಯಾರಾದರೂ ಬಿಜೆಪಿಗೆ ಬಂದರೆ ಸ್ವಾಗತ ಕೋರುತ್ತೇನೆ. ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ಬಗ್ಗೆ ಮಾತುಕತೆ ನಡೆದಿದೆ. ಈ ಬಗ್ಗೆ ಇನ್ನೂ ಅಂತಿಮವಾಗಿಲ್ಲ.
ಈ ಬಗ್ಗೆ ನಿಮಗೆ ಮೊದಲು ಮಾಹಿತಿ ತಿಳಿಯುತ್ತದೆ ಎಂದು ಪ್ರಶ್ನೆ ಒಂದಕ್ಕೆ ಪ್ರತಿಕ್ರಿಯಿಸಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಪಕ್ಷ ಸಂಘಟನೆಗೆ ಇಡೀ ರಾಜ್ಯದೆಲ್ಲೆಡೆ ಸಂಚರಿಸಲಿದ್ದಾರೆ. ಅವರು ಯುವ ಶಕ್ತಿಯಾಗಿದ್ದಾರೆ. ಅವರನ್ನು ಇಡೀ ರಾಜ್ಯದಲ್ಲಿ ಸದ್ಭಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಚಿಸಿದ್ದೇವೆ. ನಮ್ಮ ಈ ಆಸೆ ಖಂಡಿತ ನೆರವೇರಲಿದೆ ಎಂದರು.
ವಿಜಯೇಂದ್ರ ಅವರು ವರುಣಾದಲ್ಲಿ ನಿಂತರೂ ಅತಿ ಹೆಚ್ಚು ಬಹುಮತದಿಂದ ಗೆಲುವು ಸಾಧಿಸುವ ವಿಶ್ವಾಸವಿದೆ. ಆದರೆ ಯಡಿಯೂರಪ್ಪ ಅವರು ಶಿಕಾರಿಪುರದಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡಲಿ ಎಂದು ಹೇಳಿದ್ದಾರೆ. ಅವರ ಮಾತು ತೆಗೆದು ಹಾಕುವ ಪ್ರಶ್ನೆಯೇ ಇಲ್ಲ. ದೊಡ್ಡವರ ಮನಸ್ಸಿಗೆ ನೋವಾಗುವ ಕೆಲಸ ಮಾಡುವುದಿಲ್ಲ. ಆದರೆ, ಅವರು ಯುವ ಶಕ್ತಿಯಾಗಿರುವುದರಿಂದ ಕೇವಲ ಶಿಕಾರಿಪುರವಲ್ಲದೇ, ಇಡೀ ರಾಜ್ಯಕ್ಕೆ ಅಗತ್ಯವಾಗಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ 130 ರಿಂದ 140 ಸ್ಥಾನ ಗೆಲ್ಲಲಿದೆ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ. ಯಡಿಯೂರಪ್ಪ ಅವರು ಅತಿ ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ಈ ವಯಸ್ಸಿನಲ್ಲೂ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಸರ್ಕಾರದ ಸಾಧನೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯ ಶೈಲಿ ಮೂಲಕ ಜನರಿಗೆ ತಲುಪುವ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿಯಿಂದಾಗಿ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ನವರು, ಜೆಡಿಎಸ್ ನವರು ಚುನಾವಣೆಯಲ್ಲಿ ಸೋಲುವ ಭಯದ ವಾತಾವರಣದಿಂದ ಏನೇನೋ ಹೇಳಿಕೆ ಗಳನ್ನು ನೀಡುತ್ತಿದ್ದಾರೆ. ಅದರ ಬಗ್ಗೆ ನಮಗೆ ಚಿಂತೆಯಿಲ್ಲ ಎಂದರು.

ಬಿಜೆಪಿಯ ಹಲವಾರು ಶಾಸಕರು ಕಾಂಗ್ರೆಸ್ ಗೆ ಬರುತ್ತಾರೆಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಯಾರೋ ಒಬ್ಬರು ಜೆಡಿಎಸ್ ನಿಂದ ಹೋಗಿದ್ದಾರೆ. ಬಿಜೆಪಿಯಿಂದ ಯಾರೂ ಹೋಗಿಲ್ಲ. ಕಾಂಗ್ರೆಸ್ ನಿಂದ ಅಸಮಾಧಾನಗೊಂಡೇ ನಾವು ಬಿಜೆಪಿಗೆ ಬಂದಿರುವುದು. ಕಾಂಗ್ರೆಸ್ ನವರು ಹಾಗೆ ಹೇಳಿದರೆ ಅವರಿಗೆ ಶಕ್ತಿ. ಅವರು ಹೇಳಲಿ ಬಿಡಿ. ಪ್ರಯತ್ನ ಯಾರಾದರೂ ಪಡಲಿ, ಆದರೆ, ಹೋಗುವವರು ಬೇಕಲ್ಲ. ಈ ಪಕ್ಷದಲ್ಲಿ ನಾವು ಖುಷಿಯಾಗಿದ್ದೇವೆ ಎಂದರು.
ನರೇಂದ್ರ ಮೋದಿಯವರ ನೇತೃತ್ವದಲ್ಲಿ ವಿಶ್ವ ಮಟ್ಟದಲ್ಲಿ ಬೆಳೆಯುತ್ತಿದೆ. ಈ ಪಕ್ಷದಲ್ಲೇ ಇದ್ದು ನಾವು ಕರ್ನಾಟಕವನ್ನು ಅಭಿವೃದ್ಧಿಪಡಿಸುತ್ತೇವೆ. ಜೆಡಿಎಸ್ ಹಾಗೂ ಕಾಂಗ್ರೆಸ್ ನಮ್ಮ ದುಶ್ಮನ್ ಎಂದು ಈಗಾಗಲೇ ಅಮಿತ್ ಶಾ ಹೇಳಿದ್ದಾರೆ. ಅವರಿಬ್ಬರ ಜೊತೆಯೂ ಅಲಾಯನ್ಸ್ ಇಲ್ಲ ಎಂದು ಓಪನ್ ಆಗಿ ಇದನ್ನು ನಮ್ಮ ಹೈಕಮಾಂಡ್ ಹೇಳಿದೆ. ಅವರೇನೋ ಪಂಚರತ್ನ ಯಾತ್ರೆ ಮಾಡಿದ್ದಾರೆ. ಅವರ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ. ನಮಗೇನು ಅದರ ಭಯ ಇಲ್ಲ ಎಂದರು.

ವಿಧಾನಸೌಧ ಗಂಗಾಜಲದಿಂದ ಶುದ್ಧ ಮಾಡಬೇಕೆಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಯಾರು ತೊಳಿತಾರೆ, ಯಾರು ಏನಾಗ್ತಾರೆ ಎಂದು ಮುಂದೆ ಅವರಿಗೆ ಗೊತ್ತಾಗುತ್ತೆ. ಯಾರ ಬಗ್ಗೆ ಟೀಕೆ, ಟಿಪ್ಪಣೆ ನಾವು ಮಾಡಲ್ಲ. ನಾವು ನಮ್ಮ ಸರ್ಕಾರ ಒಳ್ಳೆ ಕೆಲಸ ಮಾಡುತ್ತಿದ್ದೇವೆ. ಜನರು ನಮ್ಮ ಕೈ ಹಿಡಿಯುತ್ತಾರೆ. ಮತ್ತೆ ನಾವೇ ಅಧಿಕಾರಕ್ಕೆ ಬಂದು ಸರ್ಕಾರ ರಚನೆ ಮಾಡುತ್ತೇವೆ. ಒಳ್ಳೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್. ಈಶ್ವರಪ್ಪ ಗೈರು ಆಗಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈಶ್ವರಪ್ಪ ಅವರು ಬಹಳ ಕಡೆ ಓಡಾಟದಲ್ಲಿದ್ದಾರೆ. ಯಾಕೆ ಗೈರು ಎಂಬುದು ತಿಳಿದುಕೊಂಡು ಪ್ರತಿಕ್ರಿಯಿಸುತ್ತೇನೆ ಎಂದು ಪ್ರಶ್ನೆಯೊಂದಿಗೆ ಉತ್ತರಿಸಿದರು.