: ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಸಾಗರ ಕ್ಷೇತ್ರವನ್ನು ಎಲ್ಲ ಹಂತದಲ್ಲಿಯೂ ಅಗ್ರಗಣ್ಯ ಕ್ಷೇತ್ರವಾಗಿಸುವ ನಿಟ್ಟಿನಲ್ಲಿ ನೀಲನಕ್ಷೆ ತಯಾರಿಸಿ, ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.
ಇಲ್ಲಿನ ಗಣಪತಿ ಕೆರೆ ಪಕ್ಕದಲ್ಲಿ ೭೪ನೇ ಗಣರಾಜ್ಯೋತ್ಸವ ಅಂಗವಾಗಿ ಗುರುವಾರ ನಗರಸಭೆ ವತಿಯಿಂದ ಶಾಶ್ವತ ಧ್ವಜಸ್ತಂಭದ ಬೃಹತ್ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ವಿದ್ಯಾಸಾಗರ, ಸ್ವಚ್ಚ ಸಾಗರ, ಆರೋಗ್ಯ ಸಾಗರ, ಅಭಿವೃದ್ದಿ ಸಾಗರವಾಗಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳು ಹಂತಹಂತವಾಗಿ ನಡೆಯುತ್ತಿದೆ. ೧೬ ಕೋಟಿ ರೂ. ವೆಚ್ಚದಲ್ಲಿ ಶಾಲಾಕಾಲೇಜುಗಳಲ್ಲಿ ಶೌಚಾಲಯ ನಿರ್ಮಿಸಲಾಗುತ್ತಿದೆ. ೪೬೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ತುಮರಿ ಸೇತುವೆ ಕಾಮಗಾರಿ ಭರದಿಂದ ಸಾಗಿದೆ. ೧೦೦ ಕೋಟಿ ರೂ. ವೆಚ್ಚದ ಹಸಿರುಮಕ್ಕಿ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೆ ಪಟಗುಪ್ಪ ಸೇತುವೆ ಸಾರ್ವಜನಿಕರ ಉಪಯೋಗಕ್ಕೆ ಒದಗಿಸಿಕೊಡಲಾಗಿದೆ. ದೇಶದ ೪ ಆಸ್ಪತ್ರೆಗಳಿಗೆ ಉತ್ತಮ ಆಸ್ಪತ್ರೆ ಎನ್ನುವ ಪ್ರಶಸ್ತಿ ಬಂದಿದ್ದು, ಈ ಪಟ್ಟಿಯಲ್ಲಿ ಸಾಗರ ಆಸ್ಪತ್ರೆಯೂ ಸೇರಿರುವುದು ಹೆಮ್ಮೆಯ ಸಂಗತಿ ಎಂದರು.

ಸಾಗರವನ್ನು ೨೫ ವರ್ಷಗಳ ಮುಂದಾಲೋಚನೆಯಡಿ ಅಭಿವೃದ್ದಿ ಮಾಡಲಾಗುತ್ತಿದೆ. ನಗರವನ್ನು ಸಂಪರ್ಕಿಸುವ ಎಲ್ಲ ಭಾಗದ ರಸ್ತೆಗಳನ್ನು ಚತುಷ್ಪಥ ರಸ್ತೆಯಾಗಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲಾಗಿದೆ. ನಗರದ ೮ ಕಿ.ಮೀ. ಸುತ್ತಳತೆಯಲ್ಲಿ ವಿದ್ಯುತ್ ದೀಪ ಅಳವಡಿಸುವ ಕೆಲಸ ಮುಂದಿನ ಒಂದು ವಾರದೊಳಗೆ ನಡೆಯಲಿದೆ. ಅಭಿವೃದ್ದಿ ಸಂದರ್ಭದಲ್ಲಿ ಸಣ್ಣಪುಟ್ಟ ಲೋಪ ಆಗುತ್ತದೆ. ಅದನ್ನು ಸರಿಪಡಿಸಿಕೊಂಡು ಹೋಗಲಾಗುತ್ತದೆ ಎಂದರು.

ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್, ಪೌರಾಯುಕ್ತ ಎಚ್.ಕೆ.ನಾಗಪ್ಪ ಇನ್ನಿತರರು ಹಾಜರಿದ್ದರು.