ಇಲ್ಲಿನ ಇಕ್ಕೇರಿ ರಸ್ತೆಯ ಗಣೇಶ್ ಎಂಬುವವರ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಸೋಮವಾರ ನಡೆದಿದೆ.

ಗಣೇಶ್ ಅವರ ಮನೆಯಲ್ಲಿ ದೇವರ ಎದುರು ಹಚ್ಚಿಟ್ಟಿದ್ದ ದೀಪ ಉರುಳಿ ಬಿದ್ದು ಅಗ್ನಿ ಅವಘಡ ಸಂಭವಿಸಿದೆ ಎಂದು ಹೇಳಲಾಗಿದ್ದು, ಮನೆಯಲ್ಲಿದ್ದ ಎಲ್ಲ ವಸ್ತುಗಳು ಸುಟ್ಟು ಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಬೆಂಕಿ ತಗುಲಿದಾಗ ಪಕ್ಕದ ಕುಶನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೇಶವ ಮತ್ತು ಯುವಕರಾದ ಸಾಕೀಬ್, ಇಮ್ರಾನ್ ಎಂಬುವವರು ಧೈರ್ಯದಿಂದ ಮನೆ ಸಂಪರ್ಕದ ವಿದ್ಯುತ್ ತಂತಿಗಳನ್ನು ಕಡಿತಗೊಳಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ, ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲವಾದಲ್ಲಿ ಅಕ್ಕಪಕ್ಕದ ಮನೆಗಳಿಗೂ ಬೆಂಕಿ ತಗಲುವ ಸಾಧ್ಯತೆ ಇತ್ತು.