: ನಾನು ಸಾಗರ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯೆ ವಿನಃ, ಅಭ್ಯರ್ಥಿ ಎಂದು ಎಲ್ಲೂ ಹೇಳಿಲ್ಲ. ಕಾಗೋಡು ತಿಮ್ಮಪ್ಪ ಸೇರಿದಂತೆ ಪಕ್ಷದ ವರಿಷ್ಟರು ಯಾರಿಗೆ ಟಿಕೇಟ್ ಕೊಟ್ಟರೂ ನಾನು ಗೆಲುವಿಗಾಗಿ ಕೆಲಸ ಮಾಡುತ್ತೇನೆ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇಲ್ಲಿನ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ‘ಮೀಟ್ ದಿ ಪ್ರೆಸ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕ್ಷೇತ್ರವ್ಯಾಪ್ತಿಯಲ್ಲಿ ಕಾಂಗ್ರೇಸ್ ಪಕ್ಷ ಗೆಲ್ಲಬೇಕು ಎನ್ನುವುದು ನನ್ನ ಅಭಿಲಾಷೆ ಎಂದರು.
ನಾನು ಎರಡು ಬಾರಿ ಶಾಸಕನಾಗಿ ಕ್ಷೇತ್ರವನ್ನು ಪ್ರತಿನಿಧಿಸಿದ್ದೇನೆ. ಅಂದು ಹೆಚ್ಚು ಬಜೆಟ್ ಇರುತ್ತಿರಲಿಲ್ಲ. ಈಗ ಹೆಚ್ಚು ಅನುದಾನ ಬರುತ್ತಿದ್ದರೂ ಅಭಿವೃದ್ದಿಯಲ್ಲಿ ಕ್ಷೇತ್ರ ತೀರ ಹಿಂದೆ ಉಳಿದಿದೆ. ನಾಲ್ಕೂವರೆ ವರ್ಷಗಳಿಂದ ಸುಮ್ಮನಿದ್ದು ಈಗ ನಗರ ಯೋಜನಾ ಪ್ರಾಧಿಕಾರ ಮಾಡಲಾಗಿದೆ. ಹೊಸನಗರದಲ್ಲಿ ಈಗ ಆರೋಗ್ಯ ರಕ್ಷಾ ಸಮಿತಿ ರಚಿಸಿದ್ದಾರೆ. ಸಣ್ಣಪುಟ್ಟ ಲೈಟ್ ಅಳವಡಿಸಿ ಅಬ್ಬರದ ಪ್ರಚಾರ ಪಡೆಯುವ ಕೆಲಸ ಬಿಜೆಪಿ ಮಾಡುತ್ತಿದೆ. ಅಭಿವೃದ್ದಿ ಬಗ್ಗೆ ಗಮನ ಹರಿಸಬೇಕಾಗಿದ್ದ ಶಾಸಕರು ಗಲ್ಲಿಗೊಂದು ಎಂ.ಎಸ್.ಐ.ಎಲ್. ಅಂಗಡಿ ತೆಗೆದು ಯುವಜನರನ್ನು ಮದ್ಯವ್ಯಸನಿಗಳಾಗಿ ಮಾಡಿರುವುದೇ ಅವರ ಸಾಧನೆ ಎಂದರು.

ಕಾಂಗ್ರೇಸ್ ಪಕ್ಷ ರಾಜ್ಯಮಟ್ಟದಲ್ಲಿ ಸಮರ್ಥವಾಗಿ ವಿರೋಧಪಕ್ಷವಾಗಿ ಕೆಲಸ ಮಾಡಿದೆ. ಜಿಲ್ಲೆ ಮತ್ತು ತಾಲ್ಲೂಕಿನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾಗಿತ್ತು. ಮುಂದಿನ ದಿನಗಳಲ್ಲಿ ಬಿಜೆಪಿ ಲೋಪದೋಷಗಳನ್ನು ಎತ್ತಿ ಹಿಡಿದು ಜನಾಂದೋಲನ ರೂಪಿಸಲಾಗುತ್ತದೆ. ಜಿಲ್ಲೆಯಲ್ಲಿ ಅತಿಹೆಚ್ಚು ಬಿಜೆಪಿ ಶಾಸಕರಿದ್ದು, ಸಂಸದರಿದ್ದರೂ ಅಭಿವೃದ್ದಿಯಿಂದ ತೀರ ಜಿಲ್ಲೆ ಹಿಂದೆ ಉಳಿದಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಒಂದಷ್ಟು ಕೆಲಸ ಆಗಿದ್ದು ಬಿಟ್ಟರೆ ನಂತರ ಯಾವುದೇ ಗುರುತಿಸುವ ಕೆಲಸ ಮಾಡಿಲ್ಲ. ನಾನು ಹಣಕ್ಕಾಗಿ ರಾಜಕೀಯ ಮಾಡುವುದಿಲ್ಲ. ನನ್ನ ರಾಜಕೀಯ ಗುರುಗಳಾದ ಎಸ್.ಬಂಗಾರಪ್ಪ ಅವರು ಜನರ ಜೊತೆಗೆ ಇರಬೇಕು ಎಂದು ಸಲಹೆ ನೀಡಿದ್ದರು. ಅದನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದು, ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತದೆ ಎಂದರು.

ಸಾಗರ ಕ್ಷೇತ್ರ ಪ್ರಜ್ಞಾವಂತರ ತವರೂರು. ಹಾಲಪ್ಪ ಹರತಾಳು ಶಾಸಕರಾದ ಮೇಲೆ ಜಾತಿ ವೈಷಮ್ಯ, ಸಂಘಟನೆಗಳ ನಡುವೆ ಬಿರುಕು ಸೃಷ್ಟಿಸುವ ಕೆಲಸ ಮಾಡಿದ್ದಾರೆ. ಎಂಡಿಎಫ್ನಲ್ಲಿ ತಾವೆ ಖುದ್ದಾಗಿ ನಿಂತು ಹಲ್ಲೆ ಮಾಡಿಸಿದ್ದಾರೆ. ಮಾರಿಕಾಂಬಾ ಸಮಿತಿಯಲ್ಲಿ ಗಲಾಟೆ ಮಾಡಿಸಿದ್ದಾರೆ. ಒಂದರ್ಥದಲ್ಲಿ ಬಿಹಾರ ಮಾದರಿಯ ಅಧಿಕಾರ ಶಾಸಕರು ನಡೆಸುತ್ತಿದ್ದಾರೆ. ಶಾಸಕರಾಗಿ ರೌಡಿಗಳನ್ನು ಅಕ್ಕಪಕ್ಕ ಇರಿಸಿಕೊಂಡು ಓಡಾಡುವ ಇಂತಹವರಿಂದ ಕ್ಷೇತ್ರದ ಅಭಿವೃದ್ದಿ ಸಾಧ್ಯವಿಲ್ಲ. ಬಡವರಿಗೆ ಹಕ್ಕುಪತ್ರ ನೀಡಿಲ್ಲ. ಒಂದು ಆಶ್ರಯ ಮನೆ ಕೊಟ್ಟಿಲ್ಲ. ಗಣಪತಿ ಕೆರೆ ಬಗ್ಗೆ ಪದೇಪದೇ ಆಸಕ್ತಿ ವಹಿಸುತ್ತಿದ್ದಾರೆ. ಗಣಪತಿ ಕೆರೆ ಜಾಗವನ್ನು ಶಾಸಕರು ಒತ್ತುವರಿ ಮಾಡಿದ್ದಾರೆ ಎನ್ನುವ ಆರೋಪ ಸಹ ಅವರ ಮೇಲೆ ಇದೆ ಎಂದು ಹೇಳಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ನಾಗೇಶ್, ಪ್ರಧಾನ ಕಾರ್ಯದರ್ಶಿ ಮಹೇಶ್ ಹೆಗಡೆ, ಉಪಾಧ್ಯಕ್ಷ ಲೋಕೇಶಕುಮಾರ್, ಖಜಾಂಚಿ ಎಂ.ಜಿ.ರಾಘವನ್, ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್ ಹಾಜರಿದ್ದರು. (