ಬೀದಿ ಬದಿ ವ್ಯಾಪಾರಸ್ಥರಿಗೆ ಕೇಂದ್ರ ಸರ್ಕಾರದ ವಿಶೇಷ ಯೋಜನೆಯಡಿಯಲ್ಲಿ ಬಡ್ಡಿ ರಹಿತ ಸಾಲವನ್ನು ನೀಡುತ್ತಿದ್ದು, ಅದರ ಸದುಪಯೋಗ ಪಡಿಸಿಕೊಳ್ಳಿ ಬೀದಿ ಬದಿ ವ್ಯಾಪಾರಸ್ಥರ ಮಕ್ಕಳು ವಿದ್ಯಾವಂತರಾಗುವಂತೆ ಮಾಡಿ ಅವರು ಕೂಡ ಬೀದಿ ಬದಿ ವ್ಯಾಪಾರಸ್ಥರು ಆಗುವುದು ಬೇಡ ಎಂದು ಶಾಸಕ ಕೆ.ಎಸ್.ಈಶ್ವರಪ್ಪನವರು ಹೇಳಿದ್ದಾರೆ.
ಅವರು ಇಂದು ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಬೀದಿ ಬದಿ ವ್ಯಾಪಾರಸ್ಥರಿಗೆ ಮತ್ತು ಕುಟುಂಬದವರಿಗೆ ಸ್ವ ನಿಧಿ ಮಹೋತ್ಸವ ಅಂಗವಾಗಿ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಸಮಾರೋಪ ಸಮಾರಂಭದಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ಚೆಕ್ ವಿತರಣೆ ಮತ್ತು ಗುರುತಿನ ಚೀಟಿ ವಿತರಿಸಿ ಮಾತನಾಡಿದರು.
೧೦ ಸಾವಿರ ರೂ.ಗಳನ್ನು ಮೊದಲು ಬೀದಿ ಬದಿ ವ್ಯಾಪಾರಸ್ಥರಿಗೆ ಕೇಂದ್ರ ಸರ್ಕಾರದ ಸ್ವನಿಧಿ ಯೋಜನೆಯಡಿಯಲ್ಲಿ ನೀಡಲಾಗುತ್ತದೆ. ಅವರು ಅದನ್ನು ಮರು ಪಾವತಿಸಿದರೆ ೨೦ ಸಾವಿರ ರೂ. ನಂತರ ೨ ಲಕ್ಷದ ವರೆಗೆ ಸಾಲ ನೀಡುವ ಮತ್ತು ಬೀದಿ ಬದಿ ವ್ಯಾಪಾರಸ್ಥರಿಗೆ ಸಹಾಯ ಹಸ್ತ ನೀಡುವ ಕಾರ್ಯಕ್ರಮ ಕೇಂದ್ರ ಸರ್ಕಾರದಿಂದ ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗಪಡಿಸಿಕೊಳ್ಳಿ ಎಂದರು.
ಶಿವಮೊಗ್ಗ ನಗರದಲ್ಲಿ ೫,೨೧೯ ಬೀದಿ ಬದಿ ವ್ಯಾಪಾರಸ್ಥರಿಗೆ ಈಗಾಗಲೇ ಕಾರ್ಡು ವಿತರಿಸಲಾಗಿದೆ. ಇಂದು ೭೦೦ ಜನರಿಗೆ ಗುರುತಿನ ಚೀಟಿ ನೀಡಲಾಗುತ್ತಿದೆ. ಆದರೆ ಸಿಕ್ಕಿದ ಸಾಲ ವ್ಯಾಪಾರಕ್ಕೆ ಮಾತ್ರ ಬಳಸಿ. ಹೆಂಡದಂಗಡಿಗೆ ದಯವಿಟ್ಟು ಹಾಕಬೇಡಿ. ಮೀಟರ್ ಬಡ್ಡಿ ಸಾಲವನ್ನು ಮಾಡಲೇಬೇಡಿ. ಮೀಟರ್ ಬಡ್ಡಿಯಲ್ಲಿ ಸಾಲ ಪಡೆದು ವ್ಯಾಪಾರ ಮಾಡಿದ್ದಲ್ಲಿ ಸಾಲ ಪಡೆದ ನೀವು ಕೊಟ್ಟವ ಕೂಡ ಇಬ್ಬರು ಉದ್ದಾರವಾಗುವುದಿಲ್ಲ. ಸರ್ಕಾರದಿಂದ ನೀಡಿದ ಸಾಲವನ್ನು ನಿಯತ್ತಾಗಿ ವಾಪಾಸ್ಸು ನೀಡಿ ಹೆಚ್ಚಿನ ಸಾಲ ಪಡೆದು ವ್ಯಾಪಾರ ಅಭಿವೃದ್ಧಿ ಮಾಡಿ ಎಂದರು.
ಯಾರು ಮೊದಲು ಸಾಲ ತೀರಿಸಿ ೨ ಲಕ್ಷ ರೂ.ಗಳ ಸಾಲವನ್ನು ಮೊದಲು ಪಡೆಯುತ್ತಾರೋ ಅವರಿಗೆ ನನ್ನ ವೈಯಕ್ತಿಕ ೨೫ ಸಾವಿರ ರೂ.ಗಳನ್ನು ಪ್ರೋತ್ಸಾಹ ಧನವನ್ನಾಗಿ ನೀಡುತ್ತೇನೆ ಎಂದು ಘೋಷಿಸಿದರು. ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಕೊಟ್ಟ ಸಾಲವನ್ನು ಹೆಂಡದಂಗಡಿಗೆ ಹಾಕುವುದಿಲ್ಲವೆಂದು ಪ್ರಮಾಣ ಮಾಡಿ ಎಂದರು.
ಸರ್ಕಾರ ನೀಡಿದ ಸಾಲದ ಹಣವನ್ನು ಹೆಂಡದಂಗಡಿಗೆ ಹಾಕಿದರೆ ಹೆಂಡತಿ ಮಕ್ಕಳಿಗೆ ವಿಷ ಕೊಟ್ಟಹಾಗೆ ಆಗುತ್ತದೆ. ಸಾಲ ಬೇಗ ತೀರಿಸಿ ಹೆಚ್ಚಿನ ಸಾಲ ಪಡೆದು ಬೇಗ ಅಭಿವೃದ್ಧಿಯಾಗಿ ಎಂದು ಹಾರೈಸಿದರು. ಸ್ವಚ್ಛತೆಯನ್ನು ಕಾಪಾಡಿಕೊಂಡು ಯಶಸ್ವಿ ವ್ಯಾಪಾರ ನಡೆಸಿದ ಬೀದಿ ಬದಿ ವ್ಯಾಪಾರಸ್ಥರಿಗೆ ೩ ಸಾವಿರ ರೂ.ಗಳ ಬಹುಮಾನದ ಚೆಕ್ನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮೀ ಶಂಕರ್ನಾಯ್ಕ್, ವಿರೋಧ ಪಕ್ಷದ ನಾಯಕಿ ರೇಖಾರಂಗನಾಥ್, ಪಾಲಿಕೆ ಸದಸ್ಯರಾದ ಸುವರ್ಣಶಂಕರ್, ಆಯುಕ್ತರಾದ ಮಾಯಣ್ಣಗೌಡ, ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಮಣಿ ಗೌಂಡರ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.