ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಇಂದು ‘ಬದಲಾವಣೆಗಾಗಿ – ಯುವ ಆಕ್ರೋಶದ ಹೆಜ್ಜೆ’ ಜಾಥಾ ಹಮ್ಮಿಕೊಂಡಿತ್ತು.
ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿ.ಜೆ.ಪಿ. ಸರ್ಕಾರ ಸುಳ್ಳು ಭರವಸೆ ಹೇಳುತ್ತಲೇ ಬಂದಿದೆ, ಆದರೆ ವಾಸ್ತವ ಪರಿಸ್ಥಿತಿ ಏನೆಂಬುದನ್ನು ತಿಳಿದಲ್ಲಿ ಮಾತ್ರ ಇವರ ನಿಜಬಣ್ಣ ಬಯಲಾಗುವುದು, ಇಡೀ ದೇಶವನ್ನು ನಂಬಿಸಿ ಅಭಿವೃದ್ಧಿ ಮಾಡುತಿದ್ದೇವೆ ಎಂದು ಜನ ಸಾಮಾನ್ಯರನ್ನು ನಂಬಿಸಿರುವ ಇವರು ಜನ ಸಾಮಾನ್ಯರ ಬದುಕನ್ನೇ ಕಿತ್ತುಕೊಂಡಿದ್ದಾರೆ ಎಂದು ದೂರಿದರು.
ಯುವಕರು- ರೈತರು – ಬಡವ- ಕೂಲಿಕಾರ್ಮಿಕ – ಮಧ್ಯಮ ವರ್ಗದ ಜನರ ಮೇಲೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ದಿನೇ ದಿನೇ ಮಾಡುತ್ತಾ , ಯುವಕರಿಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಎಂದು ಸುಳ್ಳು ಹೇಳಿ ಸರ್ಕಾರಿ ಸೌಮ್ಯದ ಎಲ್ಲಾ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತ ಕಾರ್ಪೊರೇಟ್ ಕಂಪನಿಗಳ ಏಜೆಂಟರಂತೆ ಈ ಸರ್ಕಾರ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಇಲ್ಲಿಯವರಿಗೂ ಒಂದೇ ಒಂದು ಆಶ್ರಯ ಬಡಾವಣೆಗಳನ್ನು ಮಾಡದೆ, ವಯೋವೃದ್ಧರ ಪಿಂಚಣೆ, ಅಂಗವಿಕಲರ ವೇತನ, ವಿಧವಾ ವೇತನಾ, ಪಡಿತರ ಚೀಟಿ ಹಾಗೂ ಹಿರಿಯ ನಾಗರೀಕರಿಗೆ ಸರ್ಕಾರದಿಂದ ಸಿಗುವ ಸವಲತ್ತು, ಅತಿವೃಷ್ಟಿಯ ಪರಿಹಾರ , ರೈತರಿಗೆ ಬಿತ್ತನೆ ಬೀಜಗಳು ಗೊಬ್ಬರ ಹಾಗೂ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆಗಳನ್ನು ಸಮರ್ಪಕವಾಗಿ ನೀಡಿಲ್ಲ ಎಂದರು.
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಗರದ ರಾಮಣ್ಣ ಶೆಟ್ಟಿ ಪಾರ್ಕ್ನಿಂದ – ಅಶೋಕ ವೃತ್ತ ( ಬಸ್ ಸ್ಟ್ಯಾಂಡ್ ವೃತ್ತ) ವರೆಗೆ ಜಾಥಾ ನಡೆಸಲಾಯಿತು.
ಜಾಥಾದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಮಾಜಿ ಶಾಸಕರಾದ ಕೆಬಿ ಪ್ರಸನ್ನ ಕುಮಾರ್, ಆರ್. ಪ್ರಸನ್ನ ಕುಮಾರ್, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಎಂ. ಪ್ರವೀಣ್ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಗಿರೀಶ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ನ ಎಸ್. ಕುಮಾರೇಶ್, ಪ್ರಮುಖರಾದ ಎಸ್.ಕೆ. ಮರಿಯಪ್ಪ, ಎನ್. ರಮೇಶ್, ಎಸ್.ಪಿ. ದಿನೇಶ್, ಹೆಚ್.ಸಿ. ಯೋಗೇಶ್, ಇಸ್ಮಾಯಿಲ್ ಖಾನ್, ವಿಜಯ್ ಕುಮಾರ್, ಕೆ ರಂಗನಾಥ್, ದೇವೇಂದ್ರಪ್ಪ ಮೊದಲಾದವರಿದ್ದರು.