: ಚಿತ್ರದುರ್ಗದಲ್ಲಿ ನಡೆದ 6 ಜಿಲ್ಲೆಗಳ ಪತ್ರಕರ್ತರ ತಂಡಗಳ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ಪತ್ರಕರ್ತರ ತಂಡ ಚಾಂಪಿಯನ್ ಶಿಪ್ ಪಡೆದು ಟ್ರೋಫಿ ಮತ್ತು ನಗದು ಬಹುಮಾನ ಗಳಿಸಿರುವುದು ಅತ್ಯಂತ ಸಂತೋಷದ ವಿಷಯ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷ ಕೆ.ವಿ. ಶಿವಕುಮಾರ್ ಹೇಳಿದರು.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಲವು ವರ್ಷಗಳಿಂದ ರಾಜ್ಯಮಟ್ಟದಲ್ಲಿ ಯಾವುದೇ ಬಹುಮಾನ ಪಡೆದಿರಲಿಲ್ಲ. ಕ್ರಿಕೆಟ್ ತಂಡ ಮೊದಲ ಬಾರಿಗೆ ಈ ಬಹುಮಾನ ಮತ್ತು ಟ್ರೋಫಿಯನ್ನು ಗೆದ್ದಿದೆ. ಇದು ನಮ್ಮ ಹೆಮ್ಮೆ ಎಂದರು.
ಫೈನಲ್ ನಲ್ಲಿ ದಾವಣಗೆರೆ ಪತ್ರಕರ್ತರ ತಂಡವನ್ನು ಅತ್ಯಂತ ರೋಚಕ ರೀತಿಯಲ್ಲಿ ನಮ್ಮ ಆಟಗಾರರು ಸೋಲಿಸಿದ್ದಾರೆ. ಎಲ್ಲಾ ಆಟಗಾರರು ಸಮರ್ಥವಾಗಿ ಆಟವಾಡಿದ್ದಾರೆ. ಮ್ಯಾನ್ ಆಫ್ ದಿ ಮ್ಯಾಚ್ ಕೂಡ ನಮ್ಮ ತಂಡಕ್ಕೆ ಬಂದಿದೆ. ಈ ಬಹುಮಾನವನ್ನು ಲೋಹಿತ್ ಪಡೆದಿದ್ದಾರೆ. ಇದರೊಂದಿಗೆ ಟ್ರೋಫಿ ಹಾಗೂ 25 ಸಾವಿರ ರೂ. ನಗದು ಬಹುಮಾನ ನಮ್ಮದಾಗಿದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮುಂದಿನ ದಿನಗಳಲ್ಲಿ ಕ್ರೀಡೆಗಳಿಗೆ ಮತ್ತಷ್ಟು ಆದ್ಯತೆ ನೀಡಲಿದೆ. ಸಂಘದ ಸಂಘಟನೆಗೆ ಮತ್ತು ಸೌಹಾರ್ದತೆಗೆ ಸಂಘ ಸದಾ ಬದ್ಧವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ವಿ.ಟಿ. ಅರುಣ್, ಎನ್. ರವಿಕುಮಾರ್, ಕೆ.ಆರ್. ಸೋಮನಾಥ್, ರಂಜಿತ್ ಇದ್ದರು.