ಶಿವಮೊಗ್ಗ: ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ, ನಗರ ಹಾಗೂ ಹೊಸನಗರ ಸುತ್ತಲಿನ ಐದು ದೇವಸ್ಥಾನಗಳಲ್ಲಿ ಬೀಗ ಒಡೆದು ಕಳ್ಳತನ ಮಾಡಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರಿ ಶಾಲೆಯ ಶಿಕ್ಷಕ ಸೇರಿದಂತೆ ಇಬ್ಬರನ್ನು ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಗಾಳಪೂಜಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವಸಂತ್‌ಕುಮಾರ್ ತಂಬಾಕದ (೪೦) ಹಾಗೂ ರಾಣೆಬೆನ್ನೂರು ತಾಲ್ಲೂಕು ಗುಡ್ಡದಬೇವಿನಹಳ್ಳಿ ಗ್ರಾಮದ ನಿವಾಸಿ ಕಾರು ಚಾಲಕ ಸಲೀಂ ಕಮ್ಮಾರ (೨೮) ಬಂಧಿತರು.
ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ, ನಗರ ಹಾಗೂ ಹೊಸನಗರದಲ್ಲಿ ಐದು, ಹಾವೇರಿ ಜಿಲ್ಲೆಯ ಹಾವೇರಿ ಗ್ರಾಮೀಣ ಠಾಣೆ, ಹಂಸಬಾವಿ ಹಾಗೂ ಹಿರೇಕೆರೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಐದು ಹಾಗೂ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಬನವಾಸಿ, ಶಿರಸಿ ಗ್ರಾಮೀಣ ಹಾಗೂ ಅಂಕೋಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಎಂಟು ಸೇರಿದಂತೆ ಒಟ್ಟು ೧೮ ದೇವಸ್ಥಾನಗಳಲ್ಲಿ ಕಳ್ಳತನ ಮಾಡಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ.


ಬಂಧಿತರಿಂದ ಮಾರುತಿ ನೆಕ್ಸಾ ಎಸ್ ಕ್ರಾಸ್ ಕಾರು, ಬಜಾಜ್ ಪ್ಲಾಟಿನಂ ಬೈಕ್, ೨,೨೯ ಲಕ್ಷ ನಗದು, ೯ ಗ್ರಾಂ ಚಿನ್ನ, ೪೦೦ ಗ್ರಾಂ ಬೆಳ್ಳಿಯ ಆಭರಣ, ಹಿತ್ತಾಳೆಯ ೧೪೦ ಗಂಟೆಗಳು, ೨೭ ದೀಪದ ಕಂಬ, ೨೨ ಹಿತ್ತಾಳೆಯ ತೂಗು ದೀಪಗಳು, ಏಳು ತಾಮ್ರದ ಕೊಡಗಳು, ಪೂಜಾ ಸಾಮಗ್ರಿಗಳು ಸೇರಿದಂತೆ ಒಟ್ಟು ೧೯,೨೦,೨೮೫ ಬೆಲೆಯ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.\

ಕ್ಲಬ್ ಮೇಲೆ ಪೊಲೀಸರ ದಾಳಿ: ೧೨ ಜನರ ಬಂಧನ


ಶಿವಮೊಗ್ಗ, ಡಿ.೧೪:
ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಡಿ.ವಿ. ಎಸ್ ಸರ್ಕಲ್ ಹತ್ತಿರದ ರೋವರ್ಸ್ ಕ್ಲಬ್‌ನಲ್ಲಿ ಕೆಲವು ಜನರು ಕಾನೂನು ಬಾಹೀರವಾಗಿ ಇಸ್ಪೀಟು ಜೂಜಾಟ ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಕೋಟೆ ಪೊಲೀಸ್ ಠಾಣೆಯ ಟಿ.ಕೆ. ಚಂದ್ರಶೇಖರ್ ಹಾಗೂ ಸಿಬ್ಬಂಧಿಗಳ ತಂಡ ದಾಳಿ ನಡೆಸಿ ಕ್ಲಬ್ ನ ಮ್ಯಾನೇಜರ್ ಸೇರಿ ಒಟ್ಟು ೧೨ ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಜೂಜಾಟದಲ್ಲಿ ಪಣವಾಗಿಟ್ಟಿದ್ದ ರೂ ೧,೫೩,೨೦೦/- ನಗದು ಹಣ ಮತ್ತು ಇಸ್ಪೀಟು ಕಾರ್ಡ್‌ಗಳನ್ನು ವಶಪಡಿಸಿಕೊಂಡು, ಆರೋಪಿತರ ವಿರದ್ಧ ಅಕ್ರಮ ಜೂಜಾಟ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


ಭದ್ರಾವತಿ | ಅಡಿಕೆ ತೋಟದ ಮೇಲೆ ಪೊಲೀಸರ ದಾಳಿ

ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ಮಜ್ಜಿಗೆನಹಳ್ಳಿ ಗ್ರಾಮದ ಅಡಿಕೆ ತೋಟದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಡಿತರ ಅಕ್ಕಿಯನ್ನು ಕ್ಯಾಂಟರ್‌ಗೆ ಲೋಡ್ ಮಾಡುವಾಗ ಗ್ರಾಮಾಂತರ ಠಾಣೆಯ ಪೊಲೀಸರು ದಾಳಿ ನಡೆಸಿ ೧.೭೬ ಲಕ್ಷ ಮೌಲ್ಯದ ೮೦ ಕ್ವಿಂಟಲ್ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.
ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕ್ಯಾಂಟರ್ ವಾಹನಕ್ಕೆ ಲೋಡ್ ಮಾಡುತ್ತಿದ್ದ ಆರೋಪಿ ಭದ್ರಾವತಿ ತಾಲ್ಲೂಕಿನ ವೀರಾಪುರ ಗ್ರಾಮದ ಮೊಹಮ್ಮದ್ ಸಮೀರ್ (೩೮), ವಾಹನ ಚಾಲಕ ಊರುಗಡೂರಿನ ಪರ್ವೇಜ್ ಪಾಷಾ (೪೨) ಎಂಬುವವರನ್ನು ಬಂಧಿಸಲಾಗಿದೆ.
ಪ್ರಕರಣದ ವಿವರ: ಮೊಹಮ್ಮದ್ ಸಮೀರ್ ಎಂಬ ವ್ಯಕ್ತಿಯು ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲು, ಅನಧಿಕೃತವಾಗಿ ಸಂಗ್ರಹಿಸಿ ಕ್ಯಾಂಟರ್ ವಾಹನಕ್ಕೆ ಲೋಡ್ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸ್ ನಿರೀಕ್ಷಕರು, ಪಿಎಸ್‌ಐ ಮತ್ತು ಸಿಬ್ಬಂದಿಗಳ ನೇತೃತ್ವ ತಂಡವು ಆಹಾರ ನಿರೀಕ್ಷಕರು ಭದ್ರಾವತಿರವರೊಂದಿಗೆ ದಾಳಿ ನಡೆಸಿದ್ದಾರೆ.
ಒಟ್ಟು ೧೬೦ ಚೀಲಗಳಲ್ಲಿ ತುಂಬಿದ್ದ ಅಂದಾಜು ಮೌಲ್ಯ ೧,೭೬,೦೦೦/- ರೂಗಳ ೮೦ ಕ್ವಿಂಟಲ್ ಪಡಿತರ ಅಕ್ಕಿಯನ್ನು ಮತ್ತು ಕೃತ್ಯಕ್ಕೆ ಬಳಸಿದ ಒಂದು ಕ್ಯಾಂಟರ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

By admin

ನಿಮ್ಮದೊಂದು ಉತ್ತರ

error: Content is protected !!