ಶಿವಮೊಗ್ಗ, ಸೆ.16:
ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷರಾಗಿ ಬಿಜೆಪಿಯ ರಾಜ್ಯ ರೈತ ಮೋರ್ಚಾ ಹಾಗೂ ಮಹಿಳಾ ಮೋರ್ಚಾದ ಪ್ರಮುಖರು ಆದ ಪವಿತ್ರಾ ರಾಮಯ್ಯ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಿವಮೊಗ್ಗ ಲೋಕಸಭಾ ಚುನಾವಣೆಗೆ ಸ್ಫರ್ಧಿಸಿದ್ದಾಗ ಭಾರತೀಯ ಜನತಾ ಪಕ್ಷವನ್ನು ಜಿಲ್ಲೆಯಲ್ಲಿ ಇನ್ನಷ್ಟು ಪ್ರಬಲ ಮಾಡಬೇಕೆಂಬ ನಿರೀಕ್ಷೆಯಲ್ಲಿದ್ದ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪ ಅವರ ಕೋರಿಕೆಯಂತೆ ಭಾರತೀಯ ಜನತಾ ಪಕ್ಷ ಸೇರಿದ್ದ ಮಹಿಳಾ ಮೋರ್ಚಾ, ರೈತ ಸಂಘಟನೆಗಳ ಪ್ರಮುಖರೂ ಆಗಿದ್ದ ಪವಿತ್ರ ರಾಮಯ್ಯ ಅವರಿಗೆ ಕಾಡಾ ಅಧ್ಯಕ್ಷಗಿರಿ ದೊರೆತಿದೆ.
ಶಿವಮೊಗ್ಗ ಸಮೀಪದ ಕಾಚಿನಕಟ್ಟೆ ಎಂಬ ಹಳ್ಳಿಯೊಂದರ ಮಹಿಳೆ ಪವಿತ್ರ ರಾಮಯ್ಯ ಅವರು ಆರಂಭದಿಂದಲೂ ರೈತಸಂಘದ ರಾಜ್ಯ ನಾಯಕಿಯಾಗಿ ರಾಜ್ಯದ ಸಂಘಟನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅವರು ರೈತ ಸಂಘದ ಕಾರ್ಯಧ್ಯಕ್ಷರು, ಮಹಿಳಾ ಘಟಕದ ಅಧ್ಯಕ್ಷರಾಗಿ ೨೫ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಪಕ್ಷದ ಕಾರ್ಯ ಚಟುವಟಿಕೆಗಳ ಜೊತೆಗೆ ವಿಶೇಷವಾಗಿ ಗುರುತಿಸಿಕೊಂಡಿದ್ದ ಪವಿತ್ರಾ ರಾಮಯ್ಯ ಅವರು ೨ಭಾರಿ ರಾಜ್ಯದ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷರಾಗಿ ಪ್ರಹ್ಲಾದ್ ಜೋಷಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಕಾರ್ಯನಿರ್ವಹಣೆ ಮಾಡಿದ್ದಾರೆ. ವಿಶೇಷವಾಗಿ ಪವಿತ್ರಾ ರಾಮಯ್ಯ ಅವರು ದೆಹಲಿ ರೈತಮೋರ್ಚಾದ ವಿಶೇಷ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದರು.
ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ವಿಶೇಷ ವ್ಯಾಪ್ತಿಯನ್ನು ಹೊಂದಿದ್ದು, ರೈತರ ಚಿಕ್ಕಪುಟ್ಟ ಸಮಸ್ಯೆ ಗಳಿಂದ ಬಹುದೊಡ್ಡ ಸಮಸ್ಯೆಯಾದ ಅಚ್ಚುಕಟ್ಟು ಪ್ರದೇಶದ ನೀರಿನ ಹಂಚಿಕೆ ಜವಾಬ್ದಾರಿಯ ಎಲ್ಲ ವಿಷಯಗಳನ್ನು ಅರಿತುಕೊಂಡಿರುವ ಪವಿತ್ರ ರಾಮಯ್ಯ ಅವರ ಆಯ್ಕೆಗೆ ಬಿಜೆಪಿ ಪ್ರಮುಖರು ಹಾಗೂ ರೈತ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.
ಪವಿತ್ರ ರಾಮಯ್ಯ ಅವರು ವಿಧಾನಪರಿಷತ್ ಮಾಜಿ ಸಭಾಧ್ಯಕ್ಷರಾದ ಡಿ. ಹೆಚ್. ಶಂಕರಮೂರ್ತಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ವಿವಿಧ ಗಣ್ಯರ ಮನೆಗೆ ತೆರಳಿ ಅವರಿಂದ ಆಶೀರ್ವಾದ ಪಡೆದರು.