ಇನ್ಸ್ ಸ್ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ್
ರಾಜ್ಯಾದ್ಯಂತ ಇದೊಂದು ದಂಧೆಯಾಗಿದೆ. ಬಹಳಷ್ಟು ಪೊಲೀಸ್ ಅಧಿಕಾರಿಗಳ ಭಾವಚಿತ್ರವನ್ನು ಮುಂದಿಟ್ಟುಕೊಂಡು ಸದ್ದಿಲ್ಲದೇ ಒಂದಿಷ್ಟು ಹಣ ವಸೂಲಿಯ ದಂಧೆಯನ್ನು ಕೆಲ ಕಿಡಿಗೇಡಿಗಳು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ ಎನ್ನಲಾಗಿದೆ ಬಹಳಷ್ಟು ಕಡೆ ಜಿಲ್ಲಾ ರಕ್ಷಣಾಧಿಕಾರಿಗಳ ಫೋಟೋವನ್ನೇ ಬಳಸಿಕೊಂಡು ಈ ದಂಧೆಯನ್ನು ಮಾಡುತ್ತಿದ್ದರೆಂದು ಹೇಳಲಾಗುತ್ತಿದೆ.
ಶಿವಮೊಗ್ಹ,ಸೆ.16:
ಪೊಲೀಸ್ ಅಧಿಕಾರಿಗಳ ಫೋಟೊ ಇದ್ದರೆ ಸಾಕು ಅದನ್ನೆ ಬಳಸಿಕೊಂಡು ಒಂದಿಷ್ಟು ಎತ್ತುವಳಿ ಮಾಡಬಹುದೆಂಬ ತಂತ್ರ ಕುತಂತ್ರಗಳಿಗೆ ಪೂರಕವಾಗಿ ಪೊಲೀಸ್ ಅಧಿಕಾರಿಗಳ ಫೇಸ್‌ಬುಕ್‌ಗಳನ್ನು ಹ್ಯಾಕ್ ಮಾಡುವ ಮೂಲಕ ಒಂದಿಷ್ಟು ಖದೀಮರು ಎತ್ತುವಳಿಗಿಳಿದಿರುವ ಘಟನೆ ವರದಿಯಾಗಿದೆ.
ಈ ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಹಣ ಹಾಕಿಸಿಕೊಳ್ಳುವ ಈ ದಂಧೆ ಕೋರರು ಶಿವಮೊಗ್ಗದ ಇಬ್ಬರು ಇನ್ಸ್‌ಪೆಕ್ಟರ್‌ಗಳು ಹಾಗೂ ನಿವೃತ್ತ ಸಬ್‌ಇನ್ಸ್‌ಪೆಕ್ಟರ್ ಅವರ ಫೇಸ್ ಬುಕ್ ಹ್ಯಾಕ್ ಮಾಡಿ ವಂಚನೆಗಿಳಿದಿದ್ದ ಸಂಗತಿ ಬೆಳಕಿಗೆ ಬಂದಿದೆ.
ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹಾಗೂ ಸೈಬರ್ ಕ್ರೈಂ ಬೇಧಿಸುವಲ್ಲಿ ಅತ್ಯಂತ ಯಶಸ್ವಿಯಾದ ಪೊಲೀಸ್ ಅಧಿಕಾರಿಯೆಂದೇ ಹೆಸರಾದ ಅಭಯ್ ಪ್ರಕಾಶ್, ಪ್ರಸ್ತುತ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿರುವ ಹಾಗೂ ಶಿವಮೊಗ್ಗ ಜಿಲ್ಲೆಯ ಎಲ್ಲಾ ವಲಯಗಳಲ್ಲಿ ಅತ್ಯಂತ ಯಶಸ್ವಿ ದಾಳಿಗಳನ್ನು ನಡೆಸಿರುವ ಮಂಜುನಾಥ್ ಮತ್ತು ನಿವೃತ್ತ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಬಸವರಾಜ್ ಅವರ ಫೇಸ್‌ಬುಕ್‌ಗಳನ್ನು ಹ್ಯಾಕ್ ಮಾಡಿ ಪರಿಚಿತರಿಗೆ ಪ್ರೀತಿಯಿಂದ ಹಾಗೂ ದಬ್ಬಾಳಿಕೆಯಿಂದ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ವರದಿಯಾಗದೆ.
ಅಭಯ್ ಪ್ರಕಾಶ್ ಹೆಸರಿನಲ್ಲಿ ಮೂವರು ಸ್ನೇಹಿತರಿಂದ ತಲಾ ೨೦ ಸಾವಿರ ರೂಪಾಯಿ ವಂಚಿಸಿರುವ ಈ ದಂಧೆಕೋರರು ಮಂಜುನಾಥ್ ಹಾಗೂ ಬಸವರಾಜ್ ಹೆಸರಿನಲ್ಲೂ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಈ ಸುದ್ದಿ ಬಹಿರಂಗವಾದ ತಕ್ಷಣ ಅಧಿಕಾರಿಗಳಿಗೆ ಬರುತ್ತಿದ್ದ ಕರೆಗಳು ಹೆಚ್ಚಿವೆ. ಇಲ್ಲಿ ಪೊಲೀಸ್ ಅಧಿಕಾರಿಗಳ ಎಫ್‌ಬಿ ಅಕೌಂಟ್ ರೂಪಿಸಿಕೊಂಡು ಅವರ ಸ್ವಂತಃ ಎಫ್‌ಬಿ ಅಕೌಂಟ್‌ನಂತೆಯೇ ಅಲ್ಲಿನ ಫೋಟೋಗಳನ್ನೇ ಇಲ್ಲಿ ಬಳಿಸಿಕೊಂಡು ಇಲ್ಲಿನ ಹೊಸ ಫೇಸ್‌ಬುಕ್‌ನ ಮೇಸೆಂಜರ್ ಮೂಲಕ ಹಾಯ್ ಚೆನ್ನಾಗಿದ್ದೀರಾ ಎಂಬ ಎಲ್ಲಾ ಚರ್ಚೆ ನಡೆಸಿ ಹಣ ಹಾಕಲು ಒತ್ತಾಯಿಸಿದ್ದಾರೆ. ಕೆಲವೊಮ್ಮೆ ಧಮಕಿ ಹಾಕಿದ್ದಾರೆ. ಯಾರಿಗೂ ಹೇಳದಂತೆ ಒತ್ತಾಯಿಸಿರುವ ಘಟನೆಯೂ ನಡೆದಿದೆಯಂತೆ ಈ ಸಂದರ್ಭದಲ್ಲಿ ಈ ಅಧಿಕಾರಿಗಳ ಮೊಬೈಲ್ ನಂ. ಇದ್ದವರಲ್ಲಿ ಕೆಲವರು ಫೋನ್ ಮಾಡಿದ್ದಾರೆ. ಮತ್ತೆ ಕೆಲವರು ಭಯಪಟ್ಟು ಹಣ ಹಾಕಲು ಮುಂದಾಗಿದ್ದಾರೆನ್ನಲಾಗಿದೆ.
ಇಂತಹ ಸಂಗತಿ ಬಹಿರಂಗವಾದಕ್ಷಣ ಪೊಲೀಸ್ ಅಧಿಕಾರಗಳೇ ಬೆಚ್ಚಿ ಬಿದ್ದಿದ್ದಾರೆ. ಪೊಲೀಸರ ಫೋಟೋ ಬಳಸಿ ವಂಚಿಸುವ ಈ ಕೃತ್ಯದ ಸಮಗ್ರ ಮಾಹಿತಿಯನ್ನು ಪಡೆಯಲು ದೂರು ನೀಡಿದ್ದಾರೆ. ಯಾರೂ ಹಣ ಹಾಕಬಾರದೆಂದು ಹೇಳಿದ್ದಾರೆ.