ಶಿವಮೊಗ್ಗ: ಸರ್ಕಾರಕ್ಕೆ ಜಮಾ ಮಾಡಬೇಕಾದ ಆರ್.ಟಿ.ಐ. ಹಣವನ್ನು ಸ್ವಂತಕ್ಕೆ ಬಳಸಿದ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿ ಜಿಪಂ ಸಿಇಒ ಅವರಿಗೆ ಮನವಿ ಸಲ್ಲಿಸಿತು.

ನಗರದ ಪಿ.ಆರ್. ಇಂಜಿನಿಯರಿಂಗ್ ನ ಕಾರ್ಯಪಾಲಕ ಇಂಜಿನಿಯರಿಂಗ್ ಕಚೇರಿಯಲ್ಲಿ ಆರ್ಥಿಕ ನಿಯಮ ಉಲ್ಲಂಘಿಸಿ ಆರ್.ಟಿ.ಐ. ಹಣಕ್ಕೆ ಸಂಬಂಧಿಸಿದಂತೆ ಲೆಕ್ಕ ಶೀರ್ಷಿಕೆಗೆ ಜಮಾ ಮಾಡದೇ ದುರುಪಯೋಗಪಡಿಸಿಕೊಂಡ ಅಧಿಕಾರಿಗಳ ವಿರುದ್ಧ ತಕ್ಷಣವೇ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಆರ್.ಟಿ.ಐ. ಕಾರ್ಯಕರ್ತರೊಬ್ಬರು ದಾಖಲೆಗಾಗಿ ಆರ್.ಟಿ.ಐ. ಅಡಿಯಲ್ಲಿ ಅರ್ಜಿ ಸಲ್ಲಿಸಿ 7 ಸಾವಿರ ರೂ. ಪಾವತಿಸಿ ರಶೀದಿ ಪಡೆದಿದ್ದರು. ಆದರೆ ಈ ಹಣವನ್ನು ಸರ್ಕಾರಕ್ಕೆ ಕಟ್ಟಬೇಕಾಗಿದ್ದ ಅಧಿಕಾರಿಗಳು ಅದನ್ನು ಕಟ್ಟದೇ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಸಂಬಂಧ ಕಾರ್ಯಪಾಲಕ ಇಂಜಿನಿಯರ್ ಕಚೇರಿ ವ್ಯವಸ್ಥಾಪಕ, ಲೆಕ್ಕಾಧಿಕಾರಿ, ಮಾಹಿತಿ ಹಕ್ಕು ವಿಷಯ ನಿರ್ದೇಶಕ ಅವರನ್ನು ಅಮಾನತುಗೊಳಿಸಿ ಅರ್ಜಿದಾರ ಶಿವಕುಮಾರ್ ಅವರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಪ್ರಮುಖರಾದ ವಾಟಾಳ್ ಮಂಜುನಾಥ್, ಗಿರೀಶ್, ಲೋಕೇಶ್, ಅಕ್ಬರ್ ಭಾಷ, ಮೊಹಮ್ಮದ್, ರೇಷ್ಮಾ, ಸಂತೋಷ್, ಬಾಬ್ ಜಾನ್ ಮುಂತಾದವರಿದ್ದರು.