Tungataranga News, Shimoga Oct19.: ಶಿವಮೊಗ್ಗದಲ್ಲಿ ಗಾಂಜಾ ಸೇವನೆ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ಅಷ್ಟೆ ಅಲ್ಲದೇ, ಬೆದರಿಕೆ ಹಾಕುವಂತೆ ವರ್ತಿಸುವ ಯುವಕರನ್ನು ಶಿವಮೊಗ್ಗ ಪೊಲೀಸರು ಹಿಡಿತಲೆ ಕಟ್ಟುತ್ತಿದ್ದಾರೆ.
ನೂತನ ಎಸ್ಪಿ ಮಿಥುನಕುಮಾರ್ ಅವರ ಸೂಚನೆ ಮೇರೆಗೆ ಕಳೆದ ಐದಾರು ದಿನಗಳಿಂದ ನಗರದ ಹಾದಿಬೀದಿಯಲ್ಲಿದ್ದ ಹಾಗೂ ಖಾಲಿ ನಿವೇಶನಗಳ ಅಡ್ಡೆಯಲ್ಲಿರುತ್ತಿದ್ದ ಗಾಂಜಾ ವ್ಯಸನಿಗಳನ್ನ ಕರೆದುಕೊಂಡು ಬಂದು ಮಂಪರು ಇಳಿಯುವ ತನಕ ಕಾದು ಜಾಡಿಸಿ ನಂತರ ಉತ್ತಮ ಬದುಕು ರೂಪಿಸಿಕೊಳ್ಳಲೆಂದು ಪಿಟಿ ಕೇಸ್ ಹಾಕಿ ಬುದ್ದಿವಾದ ಹೇಳಿಕಳಿಸುತ್ತಿದ್ದರು.
ಆದರೆ ಗಾಂಜಾದ ಅಮಲಲ್ಲಿ ತೇಲುತ್ತಿರುವ ಕೆಲ ಯುವಕರು ಜಾಗೃತಿಗೊಳ್ಳುತ್ತಿಲ್ಲ.
ಇಂತಹ ವ್ಯಸನಕ್ಕೆ ಸಿಲುಕುವವರಲ್ಲಿ 20 ರಿಂದ 30 ವರ್ಷದ ಯುವಕರೇ ಹೆಚ್ಚಾಗಿದ್ದಾರೆ. ವ್ಯಸನಿಗಳನ್ನ ಪರೀಕ್ಷೆಗೆ ಒಳಪಡಿಸಿ ಅವರನ್ನ ವಶಕ್ಕೆ ಪಡೆದು ಅವರಿಗೆ ಶಿಕ್ಷೆ ಆಗುವಂತೆ ಅಥವಾ ದಂಡ ವಿಧಿಸುವ ಪ್ರಕ್ರಿಯೆಗಳು ಕಳೆದ ಏಳೆಂಟು ತಿಂಗಳಿಂದ ತೀವ್ರಗೊಂಡಿದೆ.
ಕೆಲವೊಂದು ಪ್ರಕರಣದಲ್ಲಿ ಗಾಂಜಾ ಸೇವಿಸುವವರಿಗೆ ಎಲ್ಲಿ ಗಾಂಜಾ ಸಿಗುತ್ತದೆ ಎಂದು ವಿಚಾರಣೆ ನಡೆಸಿ ಪೊಲೀಸರು ಅಂತಹವರನ್ನೂ ಬೆನ್ನುಹತ್ತಿರುವ ಉದಾಹರಣೆಗಳಿವೆ. ಆದರೂ ಯುವಕರು ಮಾತ್ರ ಈ ವ್ಯಸನದಿಂದ ಹೊರಬರುವಂತೆ ಕಾಣುತ್ತಿಲ್ಲ.
ಈ ಕುರಿತಂತೆ ನಿನ್ನೆ ದೊಡ್ಡಪೇಟೆ ಪೊಲೀಸರು ಎರಡು ಪ್ರಕರಣಗಳನ್ನ ಪತ್ತೆ ಮಾಡಿ ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎನ್ ಟಿ ರಸ್ತೆಯ ರೆಡ್ ಪಾಂಡಾ ಸಾಬಿಕೇತ್ ಪ್ರದೇಶದಲ್ಲಿ ಗಾಂಜಾ ಸೇವನೆ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಫಾರೂಕ್ ಎಂಬಾತನ ವಿರುದ್ಧ ದೂರು ದಾಖಲಾಗಿವೆ. ಈತ ಚಪ್ಪಲಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಆತನ ವಯಸ್ಸು 24 ಎಂದು ತಿಳಿದು ಬಂದಿದೆ.
ಅದರಂತೆ ಕೆಎಸ್ ಆರ್ ಟಿ ಸಿಬಸ್ ನಿಲ್ದಾಣದ ಬಳಿ ಪ್ಲಂಬರ್ ಕೆಲಸ ಮಾಡುವ 26 ವರ್ಷದ ಸಂತೋಷ್ ಎಂಬಾತನೂ ಸಹ ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತಿಸುತ್ತಿದ್ದವನನ್ನ ಮೆಗ್ಗಾನ್ ಗೆ ಕರೆತುಕೊಂಡು ಹೋಗಿ ತಪಾಸಣೆ ನಡೆಸಲಾಗಿದೆ. ಗಾಂಜಾ ಸೇವನೆ ಪತ್ತೆಯಾಗಿದೆ. ಎರಡೂ ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಗಾಂಜಾ ಪ್ರಕರಣದಲ್ಲಿ ಯುವಕರು ಎಚ್ಚೆತ್ತುಕೊಳ್ಳದೆ ಇರುವುದು ದುರಂತದ ಸಂಗತಿ. ಅವರನ್ನು ಬೇಟೆಯಾಡುವುದೂ ಸಹ ಪೊಲೀಸರಿಗೆ ಸವಾಲಿನ ಕೆಲಸವಾಗಿದೆ.