ಶಿವಮೊಗ್ಗ,ಸೆ.12:
ಜಿಲ್ಲೆಯಲ್ಲಿ ಗಾಂಜಾ, ಜೂಜಾಟಕ್ಕೆ ಬಾರೀ ಪ್ರಮಾಣದ ದಾಳಿ ನಡೆಸಿ ಖಾಖಿ ಪವರ್ ತೋರಿಸಿದ್ದ ಶಿವಮೊಗ್ಗ ಪೊಲೀಸರಿಗೆ ಈಗ ನಗರದ ಸರಗಳ್ಳತನ ತಲೆನೋವಿನ ವಿಷಯವಾಗಿದೆ.
ಮಾಂಗಲ್ಯ ಸರ ಕಳ್ಳತನದ ಸರಣಿ ಮುಂದುವರೆದಿದೆ. ಸೆ.5 ರಂದು ರವೀಂದ್ರನಗರದಲ್ಲಿ ಶಿಕ್ಷಕಿಯೋರ್ವರ ಮಾಂಗಲ್ಯ ಸರ ಕಳುವಾದರೆ, ನಿನ್ನೆ ವೆಂಕಟೇಶ್ ನಗರ 3 ನೇ ತಿರುವಿನಲ್ಲಿ ಎಸಿ ಕಚೇರಿಯ ಉದ್ಯೋಗಿಯ ಮಾಂಗಲ್ಯ ಸರ ಅಪಹರಣವಾಗಿದೆ.
ನಿನ್ನೆ ಸಂಜೆ ಶಿವಮೊಗ್ಗದ ಸರ್ಕಾರಿ ನೌಕರರಾದ ರಾಜೇಶ್ವರಿ ಎಂಬುವರ 40 ಗ್ರಾಂ ಮಾಂಗಲ್ಯವನ್ನು ಬೈಕ್ ನಲ್ಲಿ ಬಂದವರು ಅಪಹರಿಸಿರುವುದು ಬೆಳಕಿಗೆ ಬಂದಿದೆ.
ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಓಲ್ಡ್ ಬಾರ್ ಲೈನ್ ರಸ್ತೆಯಲ್ಲಿ ಆರ್ ಡಿ ಸಂಗ್ರಹಿಸಿಕೊಂಡು ಮನೆಗೆ ವಾಪಾಸಾಗುತ್ತಿದ್ದಾಗ ಪಲ್ಸರ್ ಬೈಕ್ ನಲ್ಲಿ ಬಂದ ಇಬ್ಬರು ಮಹಿಳೆಯೊರ್ವರ ಮಾಂಗಲ್ಯ ಸರವನ್ನು ಅಪಹರಿಸಿದ್ದಾರೆ.
ಜಾಹ್ನವಿ ಎಂಬ ಮಹಿಳೆ ಓಲ್ಡ್ ಬಾರ್ ಲೈನ್ ರಸ್ತೆಯಲ್ಲಿರುವ ಸಂಬಂಧಿಕರ ಮನೆಯಿಂದ ಆರ್ ಡಿ ಹಣ ಸಂಗ್ರಹಿಸಿ ಕೋಟೆ ರಸ್ತೆಯಲ್ಲಿರುವ ಮನೆಗೆ ಹೋಗುವಾಗ ಈ ಘಟನೆ ನಡೆದಿದೆ. 24 ಗ್ರಾಂ ಚಿನ್ನದ ಮಾಂಗಲ್ಯ ಸರ ಕಳವಾಗಿರುವುದಾಗಿ ಕೋಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
ನೊಂದ ಮಹಿಳೆಯರ ಮಾಂಗಲ್ಯ ಸರವನ್ನ ವಾಪಾಸ್ ಕೊಡಿಸುವಲ್ಲಿ ಪೊಲೀಸ್ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾ ಕಾದು ನೋಡಬೇಕಿದೆ.
ಹೆಲ್ಮೆಟ್ : ಕೆಲ ಪೊಲೀಸರ ಶೂರತ್ವ!
ನಗರದ ಕೆಲ ಪೊಲೀಸರ ಬಗ್ಗೆ ಇಲ್ಲಿ ಹೇಳಲೇಬೇಕು. ಹೆಲ್ಮೆಟ್ ಇಲ್ಲದವರನ್ನು ಗುಂಪಾಗಿ ನಿಂತು ಪೊಲೀಸರು ಕಳ್ಳನನ್ನು ಹಿಡಿಯುವಂತಾಡುವ ದೃಶ್ಯ ಹಾಸ್ಯಾಸ್ಪದವಾಗಿದೆ.
ಮೊನ್ನೆಯಷ್ಟೆ ಜಯನಗರದ ಸುಮಾರು ಐದಾರು ಪೊಲೀಸರು ಲಕ್ಷ್ಮಿ ಟಾಕೀಸ್ ಬಳಿ ಹೆಲ್ಮೆಟ್ ರಹಿತರನ್ನು ಹಿಡಿದು ಕೇಸುವ ಸನ್ನಿವೇಶ ಒಂದೆರಡು ಗಂಟೆ ನಗೆ ಸಿನಿಮಾ ತೋರಿಸಿದಂತಿತ್ತು. ಅಲ್ಲಿ ಅಕ್ಕಪಕ್ಕ ಜನರೇ ಹೆಲ್ಮೆಟ್ ಇಲ್ಲದವರಿಗೆ ಪೊಲೀಸರು ಹೆಲ್ಮೆಟ್ ಹಿಡಿತಾರೇ ಹೋಗಬೇಡಿ ಎನ್ನುತ್ತಿದ್ದರು.
ಅದೇ ವ್ಯಾಪ್ತಿಯ ರವೀಂದ್ರನಗರ, ವೆಂಕಟೇಶ ನಗರದ ಸರಗಳ್ಳರನ್ನು ಹಿಡಿಯೋ ಬದಲು ಇಲ್ಲಿ ವಾಹನಗಳಿಗೆ ಮುತ್ತಿಕೊಳ್ಳುತ್ತಿದ್ದ ಕಿರುಚಿತ್ರವನ್ನು ನೋಡಿ ಲಕ್ಷ್ಮಿ ಟಾಕೀಸೇ ನಗುವಂತಿತ್ತು…!
ಹೆಲ್ಮೆಟ್ ರಹಿತ ಚಾಲನೆ ತಪ್ಪು. ಆದರೆ, ಅದರ ವಿರುದ್ದ ಕಾನೂನು ಕ್ರಮಕ್ಕೆ ಅಷ್ಟೊಂದು ಪೊಲೀಸರು ಬೇಕಾ…,? ಇದು ಟ್ರಾಫಿಕ್ ಸೇರಿದಂತೆ ಎಲ್ಲಾ ಠಾಣೆಗಳ ಮಾಮೂಲಿ ಕಥೆ…,! ಹೆಲ್ಮೆಟ್ ರಹಿತರ ವಾಹನಗಳ ಹಿಂದೆ ಮುಂದೆ ಮುಗಿ ಬೀಳುವ ದೃಶ್ಯ ನೋಡಿದರೆ, ಕೆಲವರು ಅಲ್ಲಿ ಬಳಸುವ ಭಾಷೆ ಕೇಳಿದರೆ ನಾಚಿಕೆಯಾಗುತ್ತೆ. ಹೆಲ್ಮೆಟ್ ರಹಿತರು ಕೊಲೆಗಾರರಿಗಿಂತ ಹೆಚ್ಚು ಅಪರಾಧಿ ಆಗಿಬಿಡುತ್ತಾರೆ.
ಸೂಪರ್ ಕ್ಯಾಮರಾಮೆನ್ ಆಗಿರುವ ಕೆಲ ಪೊಲೀಸರು ಪೋಟೋ ತಗೆಯುವ ದೃಶ್ಯವೂ ಅತ್ಯಂತ ರೋಚಕ…!
ಈ ಕೆಲಸ ಕೆಲ ಪೊಲೀಸರ ಕಡ್ಡಾಯ ಡ್ಯೂಟಿಯಂತಾಗಿದೆ ಎಂದು ಹೇಳಲಾಗುತ್ತಿದೆ.
ಅಪಘಾತ: ಯುವಕ ಸಾವು
ಹೊಸನಗರ ತಾ. ರಿಪ್ಪನ್ ಪೇಟೆ ಸಮೀಪದ ಮೂಗುಡ್ತಿಯಲ್ಲಿ ಪಿಕಪ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ 9-30 ಕ್ಕೆ ನಡೆದಿದೆ.
ಬಾಳೂರಿನಿಂದ ರಿಪ್ಪನ್ ಪೇಟೆಗೆ ಬೈಕ್ ನಲ್ಲಿ ಬರುತ್ತಿದ್ದ ರಾಕೇಶ್ ಗೆ ರಿಪ್ಪನ್ ಪೇಟೆಯಿಂದ ಬಾಳೂರಿಗೆ ತೆರಳುತ್ತಿದ್ದ ಪಿಕಪ್ ವಾಹನ ಮೂಗುಡ್ತಿ ಗಣಪತಿ ದೇವಸ್ಥಾನದ ಬಳಿ ಡಿಕ್ಕಿ ಹೊಡೆದಿದೆ. ಸ್ಥಳದಲ್ಲಿಯೇ ರಾಕೇಶ್ (22) ಸಾವನ್ನಪ್ಪಿರುವುದು ತಿಳಿದುಬಂದಿದೆ.
ಪ್ರಕರಣ ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಬಾಳೂರಿನ ನಿವಾಸಿಯಾಗಿರುವ ರಾಕೇಶ್ ಕೆಲಸದ ನಿಮಿತ್ತ ರಿಪ್ಪನ್ ಪೇಟೆಗೆ ಬರುತ್ತಿದ್ದನು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.