ಶಿವಮೊಗ್ಗ,ಅ.11:

ಶಿವಮೊಗ್ಗ ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯಲ್ಲಿ ಮನೆಕಟ್ಟಿಕೊಳ್ಳದವರಿಗೆ ಮೂರು ತಿಂಗಳ ಬಂಪರ್ ಭಾಗ್ಯ ಸಿಕ್ಕಿದೆ. ಮನೆ ಕಟ್ಟಿಕೊಳ್ಳಲು ಸಿಕ್ಕಿರುವ ಅವಕಾಶವಿದು. ಅದೂ ಶಾಸಕ ಕೆ.ಎಸ್. ಈಶ್ವರಪ್ಪ ಅವರ ಕಳಕಳಿಯಿಂದ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಹೆಚ್. ಶಶಿಧರ್ ಅವರ ಕಾಳಜಿಯಿಂದ ಎಂದರೆ ತಪ್ಪಾಗಲಿಕ್ಕಿಲ್ಲ..!


ಬೊಮ್ಮನಕಟ್ಟೆಯ ಆಶ್ರಯ ಬಡಾವಣೆ ಎ ಯಿಂದ ಜಿ ಬ್ಲಾಕ್‍ವರೆಗೆ 20 ವರ್ಷಗಳಾದರೂ ಮನೆ ಕಟ್ಟಿಕೊಳ್ಳದ ಹಿನ್ನಲೆಯಲ್ಲಿ ಆಶ್ರಯ ಸಮಿತಿ 543 ಖಾಲಿ ನಿವೇಶನಗಳನ್ನು ಆಶ್ರಯ ಸಮಿತಿ ಇತ್ತೀಚೆಗೆ ರದ್ದುಗೊಳಿಸಿತ್ತು.

ಆದರೆ, ಸಂತ್ರಸ್ತರು ಶಾಸಕ ಹಾಗೂ ಮಾಜಿ ಡಿಸಿಎಂ ಈಶ್ವರಪ್ಪ ಅವರ ಎದುರು ಅಳಲು ತೋಡಿಕೊಂಡ ಹಿನ್ನಲೆಯಲ್ಲಿ ಮೂರು ತಿಂಗಳ ಕಾಲಾವಕಾಶ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮೂರು ತಿಂಗಳೊಳಗೆ ಹಂಚಿಕೆಯಾದ ನಿವೇಶನದಲ್ಲಿ ಮನೆಗಳನ್ನು ಕಟ್ಟಿಕೊಳ್ಳಬೇಕು. ಇಲ್ಲವಾದರೆ ಆ ನಿವೇಶನವನ್ನು ಬೇರೆಯವರಿಗೆ ಹಂಚಿಕೆ ಮಾಡಲಾಗುವುದು ಎಂದೂ ಸಹ ಎಚ್ಚರಿಕೆ ನೀಡಿದರು.

ನಿವೇಶನ ಹಂಚಿಕೆ ಸಂಬಂಧ ಅಧಿಕಾರಿಗಳು ಫಲಾನುಭವಿಗಳ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು.
ಅಡಿಪಾಯ ಬೇರೆಯವರದ್ದು ಮನೆ ನಿರ್ಮಾಣ ಮತ್ತೊಬ್ಬನದ್ದು ಎಂಬಂತಾಗಬಾರದು. ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ಎ ಯಿಂದ ಎಫ್ ಬ್ಲಾಕ್‍ವರೆಗೆ ಸಾವಿರಾರು ನಿವೇಶನಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ.

ನಿವೇಶನ ಹಂಚಿಕೆಯಾಗಿದ್ದರೂ ಕಳೆದ 20 ವರ್ಷಗಳಿಂದ ಮನೆ ಕಟ್ಟಿಕೊಳ್ಳದೇ ಸುಮ್ಮನಾಗಿದ್ದಾರೆ. ಆದರೆ ಬೊಮ್ಮನಕಟ್ಟೆಯ ಬಡಾವಣೆ ಬ್ಲಾಕ್‍ವೊಂದರಲ್ಲಿ ನಿವೇಶನ ಹಂಚಿಕೆಯಾದ ಫಲಾನುಭವಿ ಅಡಿಪಾಯ ಹಾಕಿದ್ದರು.

ಆದರೆ ಇದೀಗ ಅದೇ ಅಡಿಪಾಯದ ಮೇಲೆ ಮತ್ತೊಬ್ಬರು ಮನೆ ಕಟ್ಟಿಕೊಂಡಿದ್ದು, ಸಂತ್ರಸ್ತರು ಶಾಸಕ ಈಶ್ವರಪ್ಪ ಎದುರು ಅಳಲು ತೋಡಿಕೊಂಡರು. ತಕ್ಷಣವೇ ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಈಶ್ವರಪ್ಪ ಸೂಚನೆ ನೀಡಿದರು.

By admin

ನಿಮ್ಮದೊಂದು ಉತ್ತರ

error: Content is protected !!