ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಗೆ ಸ್ವಚ್ಛ ಸರ್ವೇಕ್ಷಣ್ -2022 ರ ಉತ್ತಮ ಶ್ರೇಯಾಂಕ ಪಡೆದಿರುವುದು ನಮ್ಮ ಜವಾಬ್ದಾರಿ ಹೆಚ್ಚಿಸಿದೆ ಎಂದು ಮೇಯರ್ ಸುನಿತಾ ಅಣ್ಣಪ್ಪ ಹೇಳಿದರು.

ಅವರು ಪಾಲಿಕೆ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ವಚ್ಛ ಸರ್ವೇಕ್ಷಣ್ ನಲ್ಲಿ ಉತ್ತಮ ಶ್ರೇಯಾಂಕ ಪಡೆಯಲು ಪಾಲಿಕೆ ಸ್ವಚ್ಛತೆ ವಿಭಾಗದಲ್ಲಿ ಹಲವು ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ಇಡೀ ದೇಶದಲ್ಲಿಯೇ ಕೆಲವೇ ಕೆಲವು ಮಹಾನಗರ ಪಾಲಿಕೆಗಳಿಗೆ ಈ ಗೌರವ ಲಭಿಸಿದೆ. ಅದರಲ್ಲಿ ಶಿವಮೊಗ್ಗವೂ ಒಂದು ಎಂಬುದು ನಮ್ಮ ಹೆಮ್ಮೆ ಎಂದರು.

ನಮಗೆ ಕಸ ವಿಲೇವಾರಿಗೆ ಹೆಚ್ಚು ಅಂಕಗಳು ಸಿಕ್ಕಿಲ್ಲ. ಕಸ ಕೂಡ ನಗರದಲ್ಲಿ ಉಳಿಯುತ್ತಿದೆ. ವಿಲೇವಾರಿಯಾಗುತ್ತಿಲ್ಲ ಎಂಬ ಕೊರಗು ಕೂಡ ನಮಗಿದೆ. ಆದರೆ, ಪ್ರತಿನಿತ್ಯ ಸಂಗ್ರಹವಾಗುವ ಘನ ತ್ಯಾಜ್ಯವನ್ನು ನವೀನ ತಂತ್ರಜ್ಞಾನಗಳ ಮೂಲಕ ಸಮರ್ಪಕವಾಗಿ ವಿಲೇವಾರಿ ಮಾಡುವುದರಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ. ಗಾಡಿಕೊಪ್ಪದಲ್ಲಿ ಬಯೋಮೆಥನೇಷನ್ ಘಟಕ ಸ್ಥಾಪಿಸಲಾಗಿದೆ. ಹಾಗೆಯೇ, ಪಾಲಿಕೆ ವ್ಯಾಪ್ತಿಯಲ್ಲಿ ಶೂನ್ಯ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿ ತ್ಯಾಜ್ಯವನ್ನು ಹಸಿ, ಒಣ ಎಂದು ವಿಂಗಡಿಸಿ ಗೊಬ್ಬರ ತಯಾರಿಸಲು ಕೂಡ ಯೋಜನೆ ರೂಪಿಸಲಾಗಿದೆ. ಒಟ್ಟಾರೆ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲಾಗುತ್ತದೆ ಎಂದರು.

ಪ್ರತಿ ಮನೆಗೆ ಡಸ್ಟ್ ಬಿನ್ ವಿತರಣೆ ಮಾಡಿದ್ದೇವೆ. ಕಸ ವಿಲೇವಾರಿ ಮಾಡುವ ವಾಹನಗಳನ್ನು ಖರೀದಿಸಿದ್ದೇವೆ. ಬಹುಮುಖ್ಯವಾಗಿ ನಮಗೆ ಹೆಚ್ಚು ಅಂಕ ಸಿಕ್ಕಿರುವುದು ಬಯಲು ಶೌಚಮುಕ್ತವನ್ನಾಗಿ ಮಾಡಿರುವುದು. ಅದರ ಜೊತೆಗೆ ದ್ರವ ತ್ಯಾಜ್ಯ ನಿರ್ವಹಣೆ ನಮ್ಮ ಹೆಮ್ಮೆಯಾಗಿದೆ. ಹೀಗೆ ಎಲ್ಲಾ ವಿಭಾಗಗಳಲ್ಲಿಯೂ ನಾವು ಹೆಚ್ಚು ಅಂಕ ಪಡೆದು ಉತ್ತಮ ಶ್ರೇಯಾಂಕ ಪಡೆದಿದ್ದೇವೆ ಎಂದರು.
ಜನರ ಸಹಕಾರದಿಂದ ಮಾತ್ರ ಉತ್ತಮ ಕೆಲಸ ಮಾಡಲು ಸಾಧ್ಯ. ಮಹಾನಗರ ಪಾಲಿಕೆ ಸಿಬ್ಬಂದಿ ಕಸ ತೆಗೆದುಕೊಂಡು ಹೋದ ಮೇಲೂ ಸಾರ್ವಜನಿಕರು ಎಲ್ಲಿ ಬೇಕೆಂದರಲ್ಲಿ ಕಸ ಹಾಕುತ್ತಾರೆ. ಇದು ನಿಲ್ಲಬೇಕು. ಪ್ರತಿದಿನ ಶೇ. 10 ರಷ್ಟು ಕಸ ವಿಲೇವಾರಿಯಾಗದೇ ಉಳಿಯುತ್ತಿದೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಕಸ ಉಳಿಯದಂತೆ ಮತತ್ತು ಕಸದಿಂದ ಗೊಬ್ಬರ ತಯಾರಿಸುವ ಘಟಕ ಸ್ಥಾಪಿಸಿ ಮತ್ತಷ್ಟು ಉತ್ತಮ ವಾತಾವರಣ ನಿರ್ಮಿಸಲಾಗುವುದು. ವಿನೂತನ ತಂತ್ರಜ್ಞಾನ ಅಳವಡಿಸಲಾಗುವುದು. ಹಸಿರು ಇಂಧನವನ್ನು ಪಾಲಿಕೆಯ ವಾಹನಗಳಲ್ಲಿ ಬಳಸಲು ಚಿಂತನೆ ನಡೆಸಲಾಗಿದೆ ಎಂದರು.

ಆಯುಕ್ತ ಮಾಯಣ್ಣಗೌಡ ಮಾತನಾಡಿ, ನಾವು ಉತ್ತಮ ಶ್ರೇಯಾಂಕ ಪಡೆದಿದ್ದೇವೆ ಎಂದ ಮಾತ್ರಕ್ಕೆ ಎಲ್ಲವೂ ಸರಿ ಇದೆ ಎಂದು ಅರ್ಥವಲ್ಲ, ಕೆಲವು ವಿಭಾಗಗಳಲ್ಲಿ ನಮ್ಮ ಸಾಧನೆ ಕಳಪೆಯಾಗಿದೆ ಎಂದು ಒಪ್ಪಿಕೊಳ್ಳುತ್ತೇವೆ. ಪಾರ್ಕ್ ನಿರ್ವಹಣೆ ಉತ್ತಮವಾಗಿಲ್ಲ. ರಸ್ತೆಗಳಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಹೀಗೆ ಹಲವು ಸಮಸ್ಯೆಗಳಿವೆ. ಸಾರ್ವಜನಿಕರು ಮುಖ್ಯವಾಗಿ ರಸ್ತೆ, ಚರಂಡಿ, ಪಾರ್ಕ್ ಮುಂತಾದ ಕಣ್ಣಿಗೆ ಕಾಣುವ ಸಮಸ್ಯೆಗಳನ್ನು ನೋಡಿ ಪ್ರತಿಕ್ರಿಯಿಸುತ್ತಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯಲ್ಲೂ ಶಿವಮೊಗ್ಗ ಪರಿಸರ ಪ್ರೇಮಿಯಾಗಿ ಬೆಳೆಯಲಿದೆ. ಅದಕ್ಕಾಗಿ ಅಧಿಕಾರಿಗಳ ತಂಡ, ಆಡಳಿತ ಪಕ್ಷ, ವಿಪಕ್ಷ, ಸಿಬ್ಬಂದಿ ಮುಖ್ಯವಾಗಿ ಜನ ಸಹಕಾರ ನೀಡುತ್ತಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ವಿಪಕ್ಷ ನಾಯಕಿ ರೇಖಾ ರಂಗನಾಥ್, ಸದಸ್ಯರಾದ ಆರತಿ ಆ.ಮ. ಪ್ರಕಾಶ್, ಧೀರರಾಜ್ ಹೊನ್ನವಿಲೆ, ಭಾನುಮತಿ ವಿನೋದ್, ಶಿವಕುಮಾರ್ ಹಾಗೂ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮಾರಪ್ಪ ಇದ್ದರು.