ಸಾಗರ : ಭಾರತ್ ಜೋಡೋ ನೆನಪಿನಲ್ಲಿ ಸಸಿ ವಿತರಿಸುವ ಕೆಲಸ ಅರ್ಥಪೂರ್ಣವಾದದ್ದು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.

ಇಲ್ಲಿನ ಗಾಂಧಿ ಮಂದಿರದಲ್ಲಿ ಶನಿವಾರ ಬ್ಲಾಕ್ ಕಾಂಗ್ರೇಸ್ ವತಿಯಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಪಾದಯಾತ್ರೆ ನೆನಪಿನಾರ್ಥ ಕಾರ್ಯಕರ್ತರಿಗೆ ಸಸಿ ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು.

ದೇಶವಾಸಿಗಳನ್ನು ಜಾಗೃತಿಗೊಳಿಸುವ ಮತ್ತು ಸದೃಢ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ಪ್ರತಿಯೊಬ್ಬರೂ ಈ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವ ಮೂಲಕ ಭವಿಷ್ಯ ಭಾರತವನ್ನು ಜಾತ್ಯಾತೀತವಾಗಿ ಕಟ್ಟುವ ಕೆಲಸಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.

ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಭಾರತ್ ಜೋಡೋ ಕಾಂಗ್ರೇಸ್ ನೇತಾರ ರಾಹುಲ್ ಗಾಂಧಿಯವರ ಪಾದಯಾತ್ರೆಯನ್ನು ದೇಶವನ್ನು ಜಾತ್ಯಾತೀತವಾಗಿ ಕಟ್ಟುವ ಸಂಕಲ್ಪದ ಪರಿಕಲ್ಪನೆಯಾಗಿದೆ. ಸಾಗರದಿಂದ ಈ ಪಾದಯಾತ್ರೆಗೆ ೨ಸಾವಿರಕ್ಕೂ ಹೆಚ್ಚಿನ ಜನರು ಪಾಲ್ಗೊಳ್ಳುತ್ತಿದ್ದಾರೆ. ಪ್ರಸ್ತುತ ದೇಶವನ್ನು ಕೋಮು ಹಿನ್ನೆಲೆಯಲ್ಲಿ ಒಡೆಯುವ ಕೆಲಸ ಮಾಡಲಾಗುತ್ತಿದ್ದು, ಭಾರತೀಯರೆಲ್ಲಾ ಒಂದೆ ಎನ್ನುವ ಘೋಷವಾಕ್ಯ ಈ ಪಾದಯಾತ್ರೆ ಮೂಲಕ ಹೊರಹೊಮ್ಮಲಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು ಮಾತನಾಡಿ, ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಮೂಲಕ ೩೦೭೦ ಕಿ.ಮೀ. ೧೫೦ ದಿನ ನಡೆಯಲಿದ್ದಾರೆ. ಪಕ್ಷ ಸಂಘಟನೆ ಜೊತೆಗೆ ಜನರನ್ನು ಒಗ್ಗೂಡಿಸುವುದು, ನಿರುದ್ಯೋಗ ಸಮಸ್ಯೆ ಬಗೆಹರಿಸುವುದು, ಭ್ರಷ್ಟಾಚಾರದ ವಿರುದ್ದ ಜನಜಾಗೃತಿ, ರೈತ ಸುರಕ್ಷತೆಗೆ ಬೇಕಾದ ಕಾಯ್ದೆ ಜಾರಿಗೆ ತರುವುದು ಸೇರಿದಂತೆ ಅನೇಕ ಉದ್ದೇಶ ಹೊಂದಲಾಗಿದೆ. ಪಾದಯಾತ್ರೆ ಮೂಲಕ ಜನರ ಸಮಸ್ಯೆಗಳನ್ನು ಕೇಳಿ ಅದಕ್ಕೆ ಪರಿಹಾರ ಕಲ್ಪಿಸುವ ಕೆಲಸ ರಾಹುಲ್ ಗಾಂಧಿಯವರು ಮಾಡುತ್ತಿದ್ದಾರೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಿ.ಆರ್.ಜಯಂತ್, ನಗರ ಅಧ್ಯಕ್ಷ ಸುರೇಶಬಾಬು, ಪ್ರಮುಖರಾದ ಗಣಪತಿ ಮಂಡಗಳಲೆ, ದಿನೇಶ್ ಡಿ., ಮಧುಮಾಲತಿ, ಜ್ಯೋತಿ ಕೋವಿ, ಧಮೇಂದ್ರ, ಮನೋಜ್ ಕುಗ್ವೆ, ನಾರಾಯಣ ಅರಮನೆಕೇರಿ, ಸದ್ದಾಂ, ತಬ್ರೇಜ್, ಮಹಮದ್ ಜಕ್ರಿಯಾ, ಜಗನ್ನಾಥ್ ಇನ್ನಿತರರು ಹಾಜರಿದ್ದರು.