ಅಡಿಕೆ ಎಲೆಚುಕ್ಕೆ ರೋಗಕ್ಕೆ ಸರ್ಕಾರ ಮೊದಲ ಹಂತದಲ್ಲಿ ೪ ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿದೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.

ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಡಿಕೆ ಎಲೆಚುಕ್ಕೆ ರೋಗ ಕಾಣಿಸಿಕೊಂಡ ತೋಟಕ್ಕೆ ಔಷದಿ ಸಿಂಪಡಣೆಗೆ ಎಕರೆಗೆ ೧೬೦೦ ರೂ. ಮೊದಲ ಹಂತದಲ್ಲಿ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದರು.

ಸಾಗರ ಮತ್ತು ಹೊಸನಗರ ತಾಲ್ಲೂಕಿನ ಕರೂರು, ಭಾರಂಗಿ, ಆವಿನಹಳ್ಳಿ, ನಿಟ್ಟೂರು, ಕಸಬಾ ಹೋಬಳಿಯ ತೋಟಗಳಿಗೆ ಎಲೆಚುಕ್ಕೆ ರೋಗ ಕಂಡು ಬಂದಿದೆ. ಸಾಗರ ತಾಲ್ಲೂಕಿನ ೯೧೮೫ ಎಕರೆ ತೋಟದಲ್ಲಿ ರೋಗ ಕಾಣಿಸಿಕೊಂಡಿದ್ದು, ಬೆಳೆಗಾರರಿಗೆ ಹೆಕ್ಸೋಲೋಜೋನ್ ಮತ್ತು ಮೈಲುತುತ್ತವನ್ನು ಸುಣ್ಣದ ಜೊತೆ ಸಿಂಪಡಣೆಗೆ ವಿಜ್ಞಾನಿಗಳು ಸೂಚನೆ ನೀಡಿದ್ದಾರೆ. ಸರ್ಕಾರ ಮೊದಲ ಹಂತದಲ್ಲಿ ಔಷಧಿಗೆ ಮಾತ್ರ ಆರ್ಥಿಕ ಸಹಕಾರ ನೀಡುತ್ತಿದ್ದು, ಹಾನಿಗೊಳಗಾದ ಬೆಳೆಗೆ, ತೋಟಕ್ಕೆ ಹೆಚ್ಚಿನ ಪರಿಹಾರ ಕೊಡಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಎಲೆಚುಕ್ಕೆ ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ೧೦ ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಸರ್ಕಾರ ಮೊದಲ ಹಂತದಲ್ಲಿ ೪ ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಉಳಿದ ೬ ಕೋಟಿ ರೂ. ಬಿಡುಗಡೆ ಮಾಡಲು ತಾತ್ವಿಕ ಒಪ್ಪಿಗೆ ನೀಡಿದೆ. ಪರಿಹಾರ ಬಿಡುಗಡೆ ಮಾಡಿಸುವಲ್ಲಿ ಗೃಹ ಸಚಿವರು ಮತ್ತು ವಿಧಾನಸಭಾಧ್ಯಕ್ಷರು ಸಹ ಒತ್ತಡ ಹಾಕಿದ್ದರು ಎಂದು ತಿಳಿಸಿದರು.
ಕೆಲವರು ಅಡಿಕೆಗೆ ಕಾಣಿಸಿಕೊಂಡಿರುವ ಎಲೆಚುಕ್ಕೆ ರೋಗದ ನಾನು ಪ್ರಯತ್ನ ನಡೆಸುತ್ತಿಲ್ಲ ಎಂದು ಹೇಳಿದ್ದರು.

ನನಗೆ ಹೇಳಿಕೆ ಕೊಡುವುದರಲ್ಲಿ ನಂಬಿಕೆ ಇಲ್ಲ. ಫಲ ಸಿಗಬೇಕು ಎನ್ನುವ ನಿಟ್ಟಿನಲ್ಲಿ ನಾನು ಮಾಡಿದ ಪ್ರಯತ್ನಕ್ಕೆ ಮೊದಲ ಹಂತದ ಯಶಸ್ಸು ದೊರೆತಿದೆ. ಸದ್ಯದಲ್ಲಿಯೆ ಹಾಳಾದ ಅಡಿಕೆ ತೋಟಕ್ಕೂ ಪರಿಹಾರ ಕೊಡಿಸಲು ಪ್ರಯತ್ನ ನಡೆಸುತ್ತೇನೆ. ಈ ಬಗ್ಗೆ ತೋಟಗಾರಿಕೆ ಸಚಿವರ ಬಳಿ ಮಾತುಕತೆ ಸಹ ನಡೆಸಿದ್ದೇನೆ. ಸೋಮವಾರ ಶಿವಮೊಗ್ಗದಲ್ಲಿ ಗೃಹ ಸಚಿವರ ನೇತೃತ್ವದಲ್ಲಿ ಅಡಿಕೆ ತೋಟದಲ್ಲಿ ಕಾಣಿಸಿಕೊಂಡಿರುವ ಎಲೆಚುಕ್ಕೆ ರೋಗಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಭೆ ಕರೆಯಲಾಗಿದೆ. ಅಲ್ಲಿ ಬೆಳೆಗಾರರ ಹಿತಾಸಕ್ತಿಗೆ ಪೂರಕವಾದ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದರು.
ಗೋಷ್ಟಿಯಲ್ಲಿ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು, ಕೆಡಿಪಿ ಸದಸ್ಯ ದೇವೇಂದ್ರಪ್ಪ ಯಲಕುಂದ್ಲಿ ಇತರರಿದ್ದರು.