ಶಿವಮೊಗ್ಗ: ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದ ವಾತಾವರಣ ಕಂಡುಬಂದಿದ್ದು, ಬೆಲೆ ಏರಿಕೆ ನಡುವೆಯೂ ಮಾರುಕಟ್ಟೆಯಲ್ಲಿ ಖರೀದಿ ಪ್ರಕ್ರಿಯೆ ಜೋರಾಗಿ ಸಾಗಿದೆ.
ಒಂದೆಡೆ ನವರಾತ್ರಿಯ ಆಚರಣೆಯ ಸಂಭ್ರಮವಾದರೆ, ಇನ್ನೊಂದೆಡೆ ಮಂಗಳವಾರ ಆಯುಧ ಪೂಜೆಗೆ ಕೈಗಾರಿಕಾ ಸ್ಥಾವರಗಳು, ಗ್ಯಾರೇಜ್, ವರ್ಕ್ ಶಾಪ್, ಪತ್ರಿಕಾ ಕಚೇರಿಗಳು, ಮುದ್ರಣಾಲಯ, ವಾಹನ ಮಾಲೀಕರು ಪೂಜೆಗೆ ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದ್ದಾರೆ.
ಆಯುಧ ಪೂಜೆಗಾಗಿ ಹೂವು, ಹಣ್ಣು ಮತ್ತಿತರೆ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ನಡೆಯುತ್ತಿದ್ದು, ಈ ಬಾರಿ ಸೇವಂತಿಗೆಗಿಂತಲೂ ಚೆಂಡು ಹೂವು ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತಿವೆ. ಹಿಡಿ ಗಾತ್ರದ ಚೆಂಡು ಹೂವು ಮಾರುಕಟ್ಟೆಗೆ ಬಂದಿದ್ದು, ನಗರದ ಪ್ರವಾಸಿ ಮಂದಿರ, ಕುವೆಂಪು ರಸ್ತೆ, ಗೋಪಿ ಸರ್ಕಲ್, ಗಾಂಧಿ ಬಜಾರ್, ವಿನೋಬನಗರ ಹೀಗೆ ಹಲವು ಕಡೆಗಳಲ್ಲಿ ಹೂವಿನ ಮಾರಾಟ ಭರದಿಂದ ನಡೆದಿದೆ.
ಪ್ರತೀ ಮಾರು ಚೆಂಡು ಹೂವಿಗೆ 80 -100 ರೂ. ಇದ್ದರೆ, ಸೇವಂತಿಗೆ ಹೂವು ಕೂಡ 100 -120 ರೂ., ಗುಲಾಬಿ, ಸುಗಂಧರಾಜ, ಮಲ್ಲಿಗೆ, ಕಾಕಡ, ಕನಕಾಂಬರ ಸೇರಿದಂತೆ ಇತರೆ ಹೂವುಗಳ ಧಾರಣೆ ಕೂಡ ಗಗನಮುಖಿಯಾಗಿದೆ. ಚೆಂಡು ಹೂವಿನ ಒಂದು ಹಾರಕ್ಕೆ 150 ರೂ. ಇದೆ. ಕುಂಬಳಕಾಯಿ ದರ ಕೂಡ 100 ರೂ. ದಾಟಿದೆ. ಆಯುಧ ಪೂಜೆಗೆ ಬೂದುಗುಂಬಳ ಇದಕ್ಕಾಗಿ ಭಾರೀ ಬೇಡಿಕೆ ಕಾಣಿಸಿದೆ. ಗಾತ್ರದ ಮೇಲೆ ಬೆಲೆ ನಿಗದಿಯಾಗಿದ್ದು, ಕನಿಷ್ಟ 25 ರೂ. ನಿಂದ 100 ರೂ. ವರೆ ಕುಂಬಳ ಮಾರಾಟವಾಗುತ್ತಿದೆ. ಲಿಂಬೆಹಣ್ಣಿಗೂ ಕೂಡ ಬೇಡಿಕೆ ಹೆಚಾಗಿದೆ. ಪ್ರತಿ ಹಣ್ಣಿಗೆ 10 ರೂ. ಗೆ 2 ಅಥವಾ 3 ಲಿಂಬುಗಳು ಮಾರಾಟವಾಗುತ್ತಿದೆ. ಇವುಗಳೊಂದಿಗೆ ಮಾವಿನ ಸೊಪ್ಪು ಮತ್ತು ಬಾಳೆ ಕಂದು ಮಾರುಕಟ್ಟೆಗೆ ಬಂದಿದೆ.
ಹಣ್ಣುಗಳಿಗೂ ಹೆಚ್ಚಿದ ಧಾರಣೆ
ಸೇಬು, ಮೂಸಂಬೆ, ಕಿತ್ತಲೆ, ಬಾಳೆ ಹಣ್ಣು ಹೀಗೆ ವಿವಿಧ ಹಣ್ಣುಗಳ ಬೆಲೆಯೂ ಹೆಚ್ಚಳವಾಗಿದೆ. ಸೇಬು 100 ರೂ.ನಿಂದ 160 ರೂ., ಮೂಸಂಬೆ 50 ರೂ.ನಿಂದ 70 ರೂ., ಕಿತ್ತಲೆ 40 ರೂ. ನಿಂದ 60 ರೂ., ಬಾಳೆ ಹಣ್ಣು 40 ರಿಂದ 60 ರೂ. ವರೆಗೆ ಪ್ರತೀ ಕೆಜಿಗೆ ಮಾರಾಟವಾಗುತ್ತಿವೆ.
ಹಬ್ಬದ ಹಿನ್ನೆಲೆಯಲ್ಲಿ ಹೊರ ಊರುಗಳಲ್ಲಿ ಉದ್ಯೋಗದಲ್ಲಿರುವವರು ತಮ್ಮ ತಮ್ಮ ಊರುಗಳಿಗೆ ಹಿಂದಿರುಗುತ್ತಿರುವುದರಿಂದ ರೈಲು, ಬಸುಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ.
: