ಶಿವಮೊಗ್ಗ, ಸೆ.28:
ಶಿವಮೊಗ್ಗ ನಗರದ ವಸತಿ ರಹಿತರಿಗೆ ಕೊಡ ಮಾಡುವ ಆಶ್ರಯ ಮನೆಗಳ ನಿರ್ಮಾಣ ಕಾರ್ಯ ಪ್ರಗತಿದಾಯವಾಗಿದ್ದು, ಸೆ.29ರ ನಾಳೆ ಬೆಳಿಗ್ಗೆ 10 ಗಂಟೆಗೆ ಎರಡನೇ ಹಂತದ 1836 ಮನೆಗಳ ನಿರ್ಮಾಣ ಕಾರ್ಯಕ್ಕೆ ಗೋಪಶೆಟ್ಟಿಕೊಪ್ಪ, ಮಂದಾರ ಶಾಲೆ ಹಿಂಭಾಗ, ದಾನಮ್ಮನ ಮೋರಿ ಪಕ್ಕದಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕರಾದ ಕೆ.ಎಸ್. ಈಶ್ವರಪ್ಪ ಮತ್ತು ಸಂಸದರಾದ ಬಿ.ವೈ. ರಾಘವೇಂದ್ರ ಅವರು ಗುದ್ದಲಿಪೂಜೆ ನೆರವೇರಿಸಲಿದ್ದಾರೆ ಎಂದು ಆಶ್ರಯ ಸಮಿತಿ ಅಧ್ಯಕ್ಷ ಹೆಚ್. ಶಶಿಧರ್ ತಿಳಿಸಿದ್ದಾರೆ.


ಶಿವಮೊಗ್ಗ ಹೊರವಲಯದ ಗೋವಿಂದಾಪುರ ಹಾಗೂ ಗೋಪಶೆಟ್ಟಿಕೊಪ್ಪದಲ್ಲಿ ಈಗಾಗಲೇ ಮೊದಲ ಹಂತದಲ್ಲಿ 3000 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಉಳಿದ 1836 ಮನೆಗಳ ನಿರ್ಮಾಣ ಕಾರ್ಯ ನಾಳೆಯಿಂದ ಆರಂಭಗೊಳ್ಳಲಿದೆ ಎಂದಿದ್ದಾರೆ.
ಈಗಾಗಲೇ ಈ ಭಾಗದಲ್ಲಿ ರಸ್ತೆ, ಚರಂಡಿ, ಯುಜಿಡಿ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ನಡೆಯುತ್ತಿದೆ. ಇದರೊಂದಿಗೆ ಶಿವಮೊಗ್ಗ ಮಹಾನಗರ ಪಾಲಿಕೆಯ ಕುಡಿಯುವ ನೀರಿನ ಸಂಪರ್ಕ ಕಾರ್ಯ ಆರಂಭಗೊಂಡಿದೆ ಎಂದಿದ್ದಾರೆ.
ಕಾರ್ಯಕ್ರಮಕ್ಕೆ ಪಾಲಿಕೆಯ ಸದಸ್ಯರು, ಅಧಿಕಾರಿಗಳು, ಆಶ್ರಯ ಸಮಿತಿ ಸದಸ್ಯರು ಆಗಮಿಸಲಿದ್ದು, ಎಲ್ಲಾ ಪಲಾನುಭವಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸುವಂತೆ ಶಶಿಧರ್ ಸಮಿತಿಯ ಪರವಾಗಿ ಸ್ವಾಗತಿಸಿದ್ದಾರೆ.

