ಶಿವಮೊಗ್ಗ: ಭಗತ್ ಸಿಂಗ್ ಜನ್ಮ ದಿನಾಚರಣೆಯಂದೇ ಕೇಂದ್ರ ಸರ್ಕಾರ ರಾಷ್ಟ್ರದ್ರೋಹಿ ಸಂಘಟನೆ ನಿಷೇಧ ಮಾಡಿರುವುದನ್ನು ಇಡೀ ದೇಶವೇ ಸಂಭ್ರಮದಿಂದ ಸ್ವಾಗತಿಸುತ್ತದೆ. ಸ್ವಾತಂತ್ರ್ಯಹೋರಾಟಗಾರರ ಆತ್ಮಕ್ಕೆ ಶಾಂತಿಯೂ ಸಿಕ್ಕಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ಅವರು ಇಂದು ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಿಎಫ್ಐ ಸಂಘಟನೆ ರಾಷ್ಟ್ರದ್ರೋಹದ ಕೆಲಸ ಮಾಡುತ್ತಿದ್ದು, ಇದನ್ನು ನಿಷೇಧಿಸಬೇಕೆಂದು ಬಿಜೆಪಿ ಹಲವು ಬಾರಿ ಮನವಿ ಮಾಡಿತ್ತು. ರಾಜ್ಯ ಸರ್ಕಾರದ ಮೂಲಕವೂ ಕೇಂದ್ರ ಸರ್ಕಾರಕ್ಕೆ ವರದಿಯ ಮೂಲಕ ಸತ್ಯಾಂಶ ತಿಳಿಸಿತ್ತು. ಎಲ್ಲಾ ರಾಜ್ಯಗಳ ಅಭಿಪ್ರಾಯದಂತೆ ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿದ್ದ ಪಿಎಫ್ಐ ಸಂಘಟನೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಅಧಿಕೃತವಾಗಿ ಬ್ಯಾನ್ ಮಾಡಿದ್ದಾರೆ ಎಂದರು.

ಪಿಎಫ್ಐ ಸಂಘಟನೆ ದೇಶ ವಿರೋಧಿ ಚಟುವಟಿಕೆ ಜೊತೆಗೆ ಉಗ್ರರ ಜೊತೆ ಸಂಬಂಧ ಹೊಂದಿತ್ತು. ಹಲವು ಯುವಕರನ್ನು ದಾರಿ ತಪ್ಪಿಸಿತ್ತು. ಪ್ರಮುಖವಾಗಿ ಹಿಂದೂ ಯುವಕರ ಹತ್ಯೆಯಲ್ಲಿ ಇವರ ಪಾತ್ರವಿರುವುದು ಸ್ಪಷ್ಟವಾಗಿತ್ತು. ಇಂತಹ ರಾಷ್ಟ್ರದ್ರೋಹಿ ಸಂಘಟನೆಯನ್ನು ನಿಷೇಧಿಸಿರುವುದಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಸ್ವಾಗತಿಸಬೇಕಾಗಿದೆ. ಅಷ್ಟೇ ಅಲ್ಲ, ರಾಷ್ಟ್ರ ಭಕ್ತ ಮುಸಲ್ಮಾನರು ಕೂಡ ಇದನ್ನು ಒಪ್ಪಬೇಕು ಎಂದರು.

ಇನ್ನಾದರು ಮುಸ್ಲಿಂ ಹಿರಿಯರು ದಾರಿ ತಪ್ಪುತ್ತಿರುವ ಸಮುದಾಯದ ಯುವಕರಿಗೆ ಎಚ್ಚರಿಕೆ ನೀಡಬೇಕು. ಪಾಕಿಸ್ತಾನಕ್ಕೆ ಜೈ ಎನ್ನುವ ಮುಸ್ಲಿಂ ಯುವಕರಿದ್ದಾರೆ. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ನಂತಹವರು ಮೂರ್ಖ ಹೇಳಿಕೆ ನೀಡಿ ನಿರುದ್ಯೋಗ ಇದಕ್ಕೆ ಕಾರಣವೆನ್ನುತ್ತಾರೆ. ಹಿಂದೂ ಯುವಕರು ನಿರುದ್ಯೋಗಿಗಳಾಗಿಲ್ಲವೇ? ಅವರು ಎಲ್ಲಾದರೂ ಬಾಂಬ್ ತಯಾರಿಸಿದ್ದಾರೆಯೇ ಎಂದು ಪ್ರಶ್ನಿಸಿದರು.