ಶಿವಮೊಗ್ಗ: ಬಿಜೆಪಿ ಸರ್ಕಾರದಲ್ಲಿ ರಾಜಕಾರಣಿಗಳಿಗೊಂದು ನ್ಯಾಯ, ಆಡಳಿತ ಪಕ್ಷದವರಿಗೊಂದು ನ್ಯಾಯ, ಸ್ವಾಮೀಜಿಗಳಿಗೊಂದು ನ್ಯಾಯವೇ ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಪ್ರಶ್ನಿಸಿದರು.

ಅವರು ಇಂದು ಮಥುರಾ ಪ್ಯಾರಡೈಸ್ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಚಿತ್ರದುರ್ಗದ ಮುರುಘಾಶ್ರೀ ಪ್ರಕರಣಕ್ಕೆ ಸಂಬಧಿಸಿದಂತೆ ಅವರನ್ನು ತಕ್ಷಣ ಬಂಧನಕ್ಕೆ ಒಳಪಡಿಸಲಾಗಿದೆ. ಇದು ಸರಿಯಿದೆ. ಆದರೆ, ಇದೇ ರೀತಿ ಐಪಿಸಿ 164 ಕಲಂನಡಿ ಕೇಸು ದಾಖಲಿಸಿದ್ದ ಬಿಜೆಪಿ ಸರ್ಕಾರದ ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸಲೇ ಇಲ್ಲ.

ಹಾಗೆಯೇ ಸಾಗರದ ಮಾಜಿ ಶಾಸಕ ಹರತಾಳು ಹಾಲಪ್ಪನವರ ಪ್ರಕರಣಕ್ಕೂ ಸಂಬಂಧಿಸಿದಂತೆ ಬಂಧಿಸಲಿಲ್ಲ. ಬಂಧಿಸಿದರೂ ವಿವಿಧ ನೆಪಗಳ ಹೇಳಿ ಆಸ್ಪತ್ರೆಗೆ ಸಾಗಿಸಲಾಯಿತು. ಇದೇ ರೀತಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರ ವಿರುದ್ಧವೂ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸು ದಾಖಲಿಸಿಕೊಳ್ಳಲಾಗಿತ್ತು. ಅವರನ್ನು ಕೇವಲ ಪೊಲೀಸರಿಂದ ವಿಚಾರಣೆ ಮಾಡಿ ಕ್ಲೀನ್ ಚಿಟ್ ನೀಡಲಾಯಿತು. ಏಕೆ ಈ ತಾರತಮ್ಯ ಎಂದು ಪ್ರಶ್ನೆ ಮಾಡಿದರು.

ಬಿಜೆಪಿ ಸರ್ಕಾರದಲ್ಲಿ ಆಡಳಿತ ಪಕ್ಷದವರೆಲ್ಲರಿಗೂ ಎಸ್ಐಟಿ ತನಿಖೆಯ ನೆಪವೊಡ್ಡಿ ಅವರನ್ನು ಕೇಸ್ನಿಂದ ಬಚಾವ್ ಮಾಡಲಾಗುತ್ತಿದೆ. ರಮೇಶ್ ಜಾರಕಿಹೊಳಿಯವರು ಸರ್ಕಾರ ರಚಿಸಲು ಕಾರಣರಾಗಿದ್ದರು ಎಂಬ ಕಾರಣಕ್ಕಾಗಿಯೇ ಅವರ ಮೇಲೆ ಪ್ರಬಲ ಕಾನೂನಿನ ಕ್ರಮ ಕೈಗೊಳ್ಳಲಿಲ್ಲ. ಕೆ.ಎಸ್. ಈಶ್ವರಪ್ಪನವರ ವಿಷಯದಲ್ಲೂ ಕೂಡ ಸರ್ಕಾರ ಅವರ ತಪ್ಪನ್ನು ಮರೆಮಾಚಿಸಿದೆ. ಇದನ್ನು ನಾವು (ಕಾಂಗ್ರೆಸ್ಸಿಗರು) ಬಲವಾಗಿ ಖಂಡಿಸುತ್ತೇವೆ ಎಂದರು.

ಮುರುಘಾ ಮಠದ ಶ್ರೀಗಳು ಮಾಡಿದ ತಪ್ಪನ್ನು ನಾವು ಒಪ್ಪುವುದಿಲ್ಲ. ಆದರೆ ಇದೇ ರೀತಿ ಎಲ್ಲಾ ಮಠಾಧೀಶ್ವರರ ಮೇಲೂ ಕ್ರಮ ಕೈಗೊಳ್ಳಬೇಕಾಗಿತ್ತು. ಕೆಲವರ ವಿಷಯದಲ್ಲಿ ಕಾನೂನನ್ನೇ ಸಡಿಲ ಮಾಡುವ ಪ್ರಭಾವವನ್ನು ಆಡಳಿತ ಸರ್ಕಾರ ಮಾಡುತ್ತಾ ಬಂದಿರುವುದು ಖಂಡನೀಯವಾಗಿದೆ. ಕಲಂ 164 ಸ್ವಾಮೀಜಿಗಳ ಮೇಲೂ ಹಾಕಲಾಗಿತ್ತು. ರಮೇಶ್ ಜಾರಕಿಹೊಳಿಯವರ ಮೇಲೂ ಹಾಕಲಾಗಿತ್ತು. ಆದರೆ, ಇವೆರಡರಲ್ಲಿ ಸ್ವಾಮೀಜಿಗೊಂದು ನ್ಯಾಯ, ರಾಜಕಾರಣಿಗಳಿಗೊಂದು ನ್ಯಾಯ ಏಕೆ? ಎನ್ನುವುದಷ್ಟೇ ನನ್ನ ಪ್ರಶ್ನೆಯೇ ಹೊರತು, ಸ್ವಾಮೀಜಿಗಳ ಪರವಾಗಿ ನಾವಂತೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ. ರಮೇಶ್ ಶಂಕರಘಟ್ಟ, ಪ್ರಮುಖರಾದ ವೈ.ಹೆಚ್. ನಾಗರಾಜ್, ಜಿ.ಡಿ. ಮಂಜುನಾಥ, ಕುಮಾರ್, ಸೋಮಶೇಖರ್, ಪಿ.ಓ. ಶಿವಕುಮಾರ್ ಉಪಸ್ಥಿತರಿದ್ದರು.